ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ತೀರ್ಪು: ಸ್ಪೀಕರ್ ಕೋಳಿವಾಡ
‘ಹೈಕೋರ್ಟ್‌ನಿಂದ ಲಿಖಿತ ರೂಪದಲ್ಲಿ ಬಂದರೆ ಉತ್ತರ’

ಬೆಂಗಳೂರು, ಮಾ. 21: ಜೆಡಿಎಸ್ ಪಕ್ಷದವರು ಬೇಗ ತೀರ್ಪು ಕೊಡಿ ಎಂದ ಕೂಡಲೇ ತೀರ್ಪು ನೀಡಲು ಸಾಧ್ಯವಿಲ್ಲ. ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ತೀರ್ಪು ನೀಡುತ್ತೇನೆ ಎಂದು ವಿಧಾನಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ನನಗೆ ಏನು ತಿಳಿಸಿಲ್ಲ. ನನಗೆ ಯಾವುದೇ ಸೂಚನೆ, ನೋಟಿಸ್ ಕೂಡ ಬಂದಿಲ್ಲ. ರಾಜ್ಯದ ಅಡ್ವೋಕೇಟ್ ಜನರಲ್ ಅವರು ನನ್ನ ವಕೀಲರು ಅಲ್ಲ ಎಂದರು.
ಬೇರೆ ವಿಚಾರಕ್ಕೆ ಎಜಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ರಾಜ್ಯಸಭೆ ಅಡ್ಡಮತದಾನಕ್ಕೆ ಸಂಬಂಧದ ನನ್ನ ತೀರ್ಪು ಕಾಯ್ದಿರಿಸಿದ್ದೇನೆ. ಇವತ್ತೇ ಕೊಡಬಹುದು, ನಾಳೆ ಕೊಡಬಹುದು, ಕೊಡದೇನೆ ಇರಬಹುದು. ಅದು ನನಗೆ ಬಿಟ್ಟ ವಿಚಾರ ಎಂದು ಕೋಳಿವಾಡ ಅವರ ತಮ್ಮದೆ ದಾಟಿಯಲ್ಲಿ ಪ್ರತಿಕ್ರಿಯಿಸಿದರು.
ಹೈಕೋರ್ಟ್‌ನಿಂದ ಲಿಖಿತ ರೂಪದಲ್ಲಿ ಬಂದ್ರೆ ನಾನು ಉತ್ತರ ನೀಡುತ್ತೇನೆ. ನನಗೆ ಯಾವುದೇ ಸೂಚನೆ ಕೋರ್ಟ್‌ನಿಂದ ಬಂದಿಲ್ಲ. ಕಾನೂನಾತ್ಮಕವಾಗಿ ನನ್ನ ಕೆಲಸ ನಾನು ನಿರ್ಧಾರ ಮಾಡುತ್ತೇನೆ. ಸಂವಿಧಾನದ ಪ್ರಕಾರ ನಾನು ಅಧಿಕಾರ ಚಲಾವಣೆ ಮಾಡ್ತಿದ್ದೇನೆ. ಇದರಲ್ಲಿ ಹೈಕೋರ್ಟ್ ಹಸ್ತಕ್ಷೇಪ ಮಾಡಬಾರದು. ಅನರ್ಹತೆ ವಿಚಾರವಾಗಿ ಕೋರ್ಟ್ ನಿರ್ದೇಶನ ನೀಡುವಂತಿಲ್ಲ. ಕೋರ್ಟ್ ವ್ಯಾಪ್ತಿಗೆ ಅನರ್ಹತೆ ವಿಚಾರ ಬರೋದಿಲ್ಲ. ಸಂವಿಧಾನದಲ್ಲೆ ಅದನ್ನ ತಿಳಿಸಲಾಗಿದೆ ಎಂದರು.





