ಮಾತುಕತೆಗೆ ಆಹ್ವಾನಿಸಿದರೆ ಸಿದ್ಧ: ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ

ಬೆಂಗಳೂರು, ಮಾ. 21: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಹ್ವಾನಿಸಿದರೆ ಮಾತುಕತೆಗೆ ಸಿದ್ದ ಎಂದು ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠರು ಮಾತುಕತೆಗೆ ಕರೆದರೆ ನಾವು ಸಿದ್ಧರಿದ್ದೇವೆ. ಆದರೆ, ಜೆಡಿಎಸ್ ವರಿಷ್ಠರ ಮನಸ್ಥಿತಿ ನಮಗೆ ಅರ್ಥ ಆಗುತ್ತಿಲ್ಲ. ಒಂದು ಕಡೆ ನಮ್ಮ ಸದಸ್ಯತ್ವ ರದ್ದು ಗೊಳಿಸುವಂತೆ ಹೋರಾಟ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವಂತೆ ವಿಪ್ ಜಾರಿ ಮಾಡಿದ್ದಾರೆ. ಯಾವುದಾದರೂ ಒಂದು ನಿಲುವಿಗೆ ಅವರು ಅಂಟಿಕೊಳ್ಳಬೇಕು. ನಮ್ಮನ್ನು ಬೇಡ ಅಂತ ತೀರ್ಮಾನಿಸಿ, ಪಕ್ಷದಿಂದ ಹೊರಹಾಕಲಿ ಅಥವಾ ನಿಮ್ಮ ಮತ ಬೇಕು ಅಂತ ವಿಪ್ ಜಾರಿ ಮಾಡಲಿ. ಇಲ್ಲವಾದರೆ ಮಾತುಕತೆಗೆ ಕರೆಯಲಿ ಎಂದು ಬಾಲಕೃಷ್ಣ ಇದೇ ವೇಳೆ ಪ್ರತಿಕ್ರಿಯೆ ನೀಡಿದರು.
ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ವಿಪ್ ಜಾರಿ ಮಾಡಿದ ಮೇಲೆ ನಾವೂ ಯೋಚನೆ ಮಾಡ್ತಿದ್ದೇವೆ. ಕೂತು ಚರ್ಚೆ ಮಾಡಿ ಎಲ್ಲ ಒಟ್ಟಾಗಿ ನಿರ್ಧಾರ ಮಾಡುತ್ತೇವೆ ಎಂದು ಬಾಲಕೃಷ್ಣ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದರು.
‘ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಹಿಂದಿರುಗುವುದಿಲ್ಲ. ಕಾಂಗ್ರೆಸ್ ಪಕ್ಷ ಸೇರುವುದು ನಿಶ್ಚಿತ. ದೇವೇಗೌಡರು ಪಕ್ಷಕ್ಕೆ ವಾಪಸ್ ಬನ್ನಿ ಎಂದರೂ ಹೋಗುವುದಿಲ್ಲ. ನಮ್ಮನ್ನು ಅವರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ತೊಂದರೆ ಕೊಡಲೆಂದು ಕೇಸ್ ಹಾಕಿದ್ದಾರೆ. ಮಾ.25ಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲಿದ್ದೇವೆ’
-ಝಮೀರ್ ಅಹ್ಮದ್‌ಖಾನ್ ಜೆಡಿಎಸ್ ಬಂಡಾಯ ಶಾಸಕ







