ಜವಾಬ್ದಾರಿಯುತ ನಿರ್ಣಯ ಕೈಗೊಳ್ಳಿ: ಯದುವೀರ್

ಬೆಂಗಳೂರು, ಮಾ.21: ವಿದ್ಯಾರ್ಥಿ ದಿಸೆಯಲ್ಲಿ ಜವಾಬ್ದಾರಿಯುತ ನಿರ್ಣಯಗಳನ್ನು ಕೈಗೊಂಡು ಶಿಕ್ಷಣ ಕಲಿತರೆ ದೇಶದ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಿಸಿದ್ದಾರೆ.
ಬುಧವಾರ ನಗರದ ಬ್ಯಾಟರಾಯನಪುರದಲ್ಲಿ ಕಲಿಸು ಸಂಸ್ಥೆಯಿಂದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ‘ಜ್ಞಾನಾಲಯ’ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದಿಸೆಯಲ್ಲಿ ಹಲವಾರು ಆಕರ್ಷಣೆಗಳಿರುತ್ತವೆ. ಯಾವುದೇ ಆಕರ್ಷಣೆಗಳಿಗೆ ಮನಸೋಲದೆ, ಜವಾಬ್ದಾರಿಯುತ ನಿರ್ಣಯಗಳನ್ನು ಕೈಗೊಂಡು ಓದಿನ ಕಡೆ ಗಮನ ಹರಿಸಬೇಕು ಎಂದರು.
ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ದೊರತಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಕಲಿಸು ಸಂಸ್ಥೆ ಬಡ ವಿದ್ಯಾರ್ಥಿಗಳ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದ ಅವರು, ಶಿಕ್ಷಣ ಕಲಿಕೆಗೆ ಗ್ರಂಥಾಲಯಗಳು ಅತ್ಯುತ್ತಮ ಸಂಪನ್ಮೂಲವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಕಿವಿಮಾತು ಹೇಳಿದರು.
ನಿಮಗೆ ಸಮಾಜಸೇವಯಲ್ಲಿ ತೊಡಗಲು ಆಸಕ್ತಿ ಇದೆಯೆ ಎಂಬ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ ಯದುವೀರ್, ನನಗೆ ಮೊದಲಿನಿಂದಲೂ ಸಮಾಜ ಸೇವೆ ಹಾಗೂ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಆಸೆಯಿತ್ತು. ಹೀಗಾಗಿ ಮೈಸೂರಿನಲ್ಲಿ ನಡೆಯುವ ಹಲವಾರು ಸಮಾಜಮುಖಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ದಸರಾ ಉತ್ಸವವನ್ನು ಹೊರತುಪಡಿಸಿದರೆ ನಾವು ಎಲ್ಲರಂತೆ ಸಾಮಾನ್ಯ ಜೀವನವನ್ನು ಸಾಗಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಮಹಾರಾಣಿ ತ್ರಿಶಿಕಾ ಕುಮಾರಿ ಒಡೆಯರ್ ಸೇರಿದಂತೆ ಕಲಿಸು ಸಂಸ್ಥೆಯ ಪದಾಧಿಕಾರಿಗಳು ಇದ್ದರು.







