ಬಿಸಿಯೂಟ ನೌಕರರ ಸಮಸ್ಯೆ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಮಾ.21: ಬಿಸಿಯೂಟ ತಯಾರು ಮಾಡುವ ಕಾರ್ಯಕರ್ತೆಯರಿಗೆ ಸೂಕ್ತ ವೇತನ ಮತ್ತು ಇನ್ನಿತರೆ ಸೌಲಭ್ಯ ಕಲ್ಪಿಸಿಕೊಡುವ ಬಗ್ಗೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಮಾಡಿದೆ.
ಈ ಸಂಬಂಧ ನೂತನವಾಗಿ ರಚನೆಯಾಗಿರುವ ಎಂಇಪಿ ಪಕ್ಷದ ವತಿಯಿಂದ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆ ಮಾಡಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾ.ಬಿ.ಎಂ. ಶ್ಯಾಮಪ್ರಸಾದ್ ಅವರನ್ನೊಳಗೊಂಡ ನ್ಯಾಯಪೀಠ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಬಿಸಿಯೂಟ ಕಾರ್ಯಕರ್ತೆಯರ ನ್ಯಾಯ ಸಮ್ಮತವಾದ ಬೇಡಿಕೆ ಈಡೇರಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಸೂಚನೆ ನೀಡಿ ಪ್ರಕರಣದ ವಿಚಾ ರಣೆಯನ್ನು ಎ.4ಕ್ಕೆ ಮುಂದೂಡಿದೆ.
ಪ್ರಕರಣವೇನು: ಸುಮಾರು ಒಂದು ತಿಂಗಳ ಹಿಂದೆ ನಗರದ ಸ್ವಾತಂತ್ರ ಉದ್ಯಾನದಲ್ಲಿ ಬಿಸಿಯೂಟ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ ಕೈಗೊಂಡಿದ್ದರು. ಈ ವೇಳೆ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿಯ ಅಧ್ಯಕ್ಷೆ ಡಾ. ನೌಹೇರಾ ಶೇಖ್ ಅವರು ಬಿಸಿಯೂಟ ಕಾರ್ಯಕರ್ತೆಯರ ಕುಂದು-ಕೊರತೆಗನ್ನು ಕೇಳಿ ಸಮಾಧಾನಪಡಿಸಿದ್ದರು.
ಜೊತೆಗೆ ಕೋರ್ಟ್ ಮೂಲಕವೇ ಅವರಿಗೆ ಸಲ್ಲಬೇಕಾದ ನ್ಯಾಯಬದ್ಧ ವೇತನ ಮತ್ತು ಇನ್ನಿತರೆ ಮೂಲಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಭರವಸೆ ನೀಡಿದ್ದರು. ಎಂಇಪಿ ಪರವಾಗಿ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿ ಸಾಧ್ಯವಾದಷ್ಟು ಬೇಗ ಇವರ ಸಮಸ್ಯೆಗಳನ್ನು ಪರಿಹಾರ ಮಾಡಿ ಎಂದು ನ್ಯಾಯಾಲಯ ಸರಕಾರಕ್ಕೆ ಸೂಚನೆ ನೀಡಿದೆ.







