ಪಿಯು ಉಪನ್ಯಾಸಕರಿಗೆ 2 ಭತ್ತೆ ನೀಡಲು ಒಪ್ಪಿಗೆ: ಮೌಲ್ಯಮಾಪನ ಬಹಿಷ್ಕಾರ ವಾಪಸ್; ಶ್ರೀಕಂಠೇಗೌಡ
ಬೆಂಗಳೂರು, ಮಾ.21: ಪಿಯು ಉಪನ್ಯಾಸಕರಿಗೆ 2 ಭತ್ತೆ ನೀಡಲು ರಾಜ್ಯ ಸರಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪಿಯು ಮೌಲ್ಯಮಾಪನ ಬಹಿಷ್ಕಾರವನ್ನು ಹಿಂಪಡೆಯಲಾಗಿದೆ ಎಂದು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶ್ರೀಕಂಠೇಗೌಡ ತಿಳಿಸಿದರು.
ಬುಧವಾರ ನಗರದ ಶಾಸಕರ ಭವನದಲ್ಲಿ ಪಿಯು ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳು ಸಭೆ ಸೇರಿ, ಪಿಯು ಉಪನ್ಯಾಕರ ವೇತನ ತಾರತಮ್ಯ ಖಂಡಿಸಿ ಪಿಯು ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧರಿಸಲಾಗಿತ್ತು. ಈ ವಿಷಯ ತಿಳಿದ ಶಿಕ್ಷಣ ಸಚಿವ ತನ್ವೀರ್ ಸೇಠ್, ವೇತನ ಭತ್ತೆ ಹೆಚ್ಚಳ ಸೇರಿದಂತೆ ಪಿಯು ಉಪನ್ಯಾಸಕರ ಕೆಲವೊಂದು ಸಮಸ್ಯೆಗಳನ್ನು ಈಡೇರಿಸಲು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಮೌಲ್ಯಮಾಪನ ಬಹಿಷ್ಕಾರವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.
ಹಲವು ವರ್ಷಗಳಿಂದ ಪಿಯು ಶಿಕ್ಷಕರ ವೇತನ ತಾರತಮ್ಯ ಸರಿಪಡಿಸುವಂತೆ ಮನವಿ ಮಾಡಿದ್ದೆವು. ಆದರೆ, ಸರಕಾರ ಮೌನ ವಹಿಸಿತ್ತು. ಈ ಬಾರಿ ಸಮಸ್ಯೆ ಈಡೇರಿಸುವವರೆಗೆ ಮೌಲ್ಯಮಾಪನ ಬಹಿಷ್ಕರಿಸಲು ನಿಶ್ಚಯ ಮಾಡಿದ್ದೆವು. ಹೀಗಾಗಿ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದೆ. ನಾಳೆಯೆ ಉಪನ್ಯಾಸಕರಿಗೆ 2 ಭತ್ತೆ ನೀಡುವ ಸಂಬಂಧ ಒಪ್ಪಂದ ದಾಖಲೆಗಳನ್ನು ಪಿಯು ಶಿಕ್ಷಕರ ಸಂಘಕ್ಕೆ ಸಲ್ಲಿಸಲಾಗುವುದು ಎಂದು ಸಚಿವ ನ್ವೀರ್ ಸೇಠ್ ಭರವಸೆ ನೀಡಿದರು.
ಶಿಕ್ಷಣ ಸಚಿವ ತನ್ವೀರ್ ಸೇಠ್ ಭರವಸೆಗೆ ಪಿಯು ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಒಪ್ಪಿಗೆ ಸೂಚಿಸಿ ಮೌಲ್ಯಮಾಪನ ಬಹಿಷ್ಕಾರವನ್ನು ವಾಪಸ್ ಪಡೆಯಲಾಗಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ರಾಮಚಂದ್ರಗೌಡ, ರಮೇಶ್‌ಬಾಬು ಹಾಗೂ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.







