ಹಣ ವಂಚನೆ ಆರೋಪ ಪ್ರಕರಣ: ನಿರ್ಮಾಪಕಿ ಜಯಶ್ರೀ ದೇವಿ ಬಂಧನ

ಬೆಂಗಳೂರು, ಮಾ.21: ಹಣ ವಿಚಾರ ಸಂಬಂಧ ಚೆಕ್ ಬೌನ್ಸ್ ಪ್ರಕರಣ ಆರೋಪದ ಮೇಲೆ ಚಿತ್ರ ನಿರ್ಮಾಪಕಿ ಜಯಶ್ರೀ ದೇವಿಯನ್ನು ಇಲ್ಲಿನ ಚಾಮರಾಜಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಶ್ವಿನಿ ಪಿಕ್ಚರ್ಸ್ ಸಂಸ್ಥೆ ಮಾಲಕ ಆನಂದ್ ಎಂಬಾತನ ಬಳಿ 53 ಲಕ್ಷ ಸಾಲ ಪಡೆದಿದ್ದ ನಿರ್ಮಾಪಕಿ ಜಯಶ್ರೀದೇವಿ ಅವರು, ಸಾಲಕ್ಕಾಗಿ ನೀಡಿದ್ದ ಚೆಕ್ ಬೌನ್ಸ್ ಆಗಿರುವುದಲ್ಲದೆ, ಹಲವು ದಿನಗಳಿಂದ ಸಾಲದ ಹಣ ನೀಡದೆ ವಂಚಿಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ಅಶ್ವಿನಿ ಪಿಕ್ಚರ್ಸ್ ಸಂಸ್ಥೆ ಮಾಲಕ ಆನಂದ್, ನಗರದ 18ನೆ ಎಸಿಎಂಎಂ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಜಯಶ್ರೀಗೆ ಸಮನ್ಸ್ ನೀಡಲಾಗಿತ್ತು. ಇಷ್ಟಾದರೂ ಜಯಶ್ರೀ ದೇವಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿ, ಮುಂದಿನ ಕ್ರಮಕ್ಕಾಗಿ ಚಾಮರಾಜಪೇಟೆ ಪೊಲೀಸರಿಗೆ ಆದೇಶಿಸಿತ್ತು.
ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಪೊಲೀಸರು ಜಯಶ್ರೀ ದೇವಿಯನ್ನು ಬಂಧಿಸಿದ್ದಾರೆ. ಕೋಣ ಈದೈತೆ, ನಮ್ಮೂರ ಮಂದಾರ ಹೂವೇ, ಹಬ್ಬ, ಸ್ನೇಹಲೋಕ, ಅಮೃತಾ ವರ್ಷಿಣಿ, ಮುಕುಂದ ಮುರಾರಿ ಸೇರಿ 25 ಕ್ಕೂ ಹೆಚ್ಚು ಚಿತ್ರಗಳನ್ನು ಜಯಶ್ರೀದೇವಿ ನಿರ್ಮಿಸಿದ್ದಾರೆ.





