ಬೆಂಗಳೂರು: ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸದಂತೆ ಆಗ್ರಹಿಸಿ ಮಾ.21 ಕ್ಕೆ ಧರಣಿ
ಬೆಂಗಳೂರು, ಮಾ.21: ಸರಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರನ್ನು ಮಾ.31ರ ಬಳಿಕ ಕರ್ತವ್ಯದಿಂದ ಬಿಡುಗಡೆಗೊಳಿಸಬಾರದು ಎಂದು ಆಗ್ರಹಿಸಿ ರಾಜ್ಯ ಅತಿಥಿ ಶಿಕ್ಷಕರ ಸಂಘ ಮತ್ತು ಉದ್ಯೋಗಕ್ಕಾಗಿ ಯುವಜನವರು ವೇದಿಕೆ ಜಂಟಿಯಾಗಿ ಮಾ.24 ರಂದು ನಗರದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಸಂಚಾಲಕ ಮುತ್ತುರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನದವರೆಗೆ ಮೆರವಣಿಗೆ ಮಾಡಲಿದ್ದು, ಅನಂತರ ಬೃಹತ್ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ಯಾವುದೇ ಕಾರಣಕ್ಕೂ ಸರಕಾರ ಶಿಕ್ಷಕರನ್ನು ಬಿಡುಗಡೆ ಮಾಡಬಾರದು ಎಂಬ ಬೇಡಿಕೆಯನ್ನು ಮಂಡಿಸಲಾಗುತ್ತದೆ ಹಾಗೂ ಸರಕಾರದ ಸಚಿವರು ಅಥವಾ ಜವಾಬ್ದಾರಿಯುತ ಅಧಿಕಾರಿಗಳು ಭೇಟಿ ಮಾಡಿ ಭರವಸೆ ನೀಡಬೇಕು ಎಂದು ಹೇಳಿದರು.
ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ಬದಲಿಸಿದರೆ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ. ಅಲ್ಲದೆ, ಕಡಿಮೆ ವೇತನಕ್ಕೆ ದುಡಿಯುತ್ತಿರುವ ಅತಿಥಿ ಶಿಕ್ಷಕರು ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆ ಪ್ರತಿ ಶೈಕ್ಷಣಿಕ ವರ್ಷ ಮುಗಿಯುತ್ತಿದ್ದಂತೆ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಮುಂದಿನ ಶೈಕ್ಷಣಿಕ ಸಾಲಿಗೆ ಮತ್ತೆ ನೇಮಿಸಿಕೊಳ್ಳಲಾಗುತ್ತದೆ. ಪ್ರತಿ ವರ್ಷ ಹೀಗೆ ಮಾಡಿದರೆ ಶಿಕ್ಷಣದ ಗುಣಮಟ್ಟ ಕಾಪಾಡುವುದು ಹೇಗೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಪ್ರಸ್ತುತ 17 ಸಾವಿರ ಅತಿಥಿ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 90 ಸಾವಿರ ಶಿಕ್ಷರ ಹುದ್ದೆಗಳು ಖಾಲಿ ಉಳಿದಿದ್ದರೂ ಸರಕಾರ ನೇಮಕ ಮಾಡಿಕೊಂಡಿಲ್ಲ. ಖಾಸಗಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರನ್ನು ನೇಮಿಸಿಕೊಂಡಿವೆ. ಇದರಿಂದ ಅಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಹಾಗಾಗಿ ಸರಕಾರ ಶಿಕ್ಷಕರ ಖಾಲಿ ಹುದ್ದೆಗಳ ನೇಮಕಕ್ಕೆ ಮುಂದಾಗಬೇಕು. ಅತಿಥಿ ಶಿಕ್ಷಕರನ್ನು ಪ್ರತಿ ವರ್ಷ ಕರ್ತವ್ಯದಿಂದ ಬಿಡುಗಡೆಗೊಳಿಸುವ ಬದಲು ಮುಂದಿನ ವರ್ಷವೂ ಮುಂದುವರಿಸಬೇಕು ಎಂದು ಆಗ್ರಹಿಸಿದರು.







