ವಲಸಿಗನ ಶೋಷಣೆ: ಭಾರತೀಯ ದಂಪತಿಗೆ ಜೈಲು

ವಾಶಿಂಗ್ಟನ್, ಮಾ. 21: ಭಾರತೀಯ ಅಕ್ರಮ ವಲಸಿಗರೊಬ್ಬರ ಕಳ್ಳ ಸಾಗಣೆ ಮತ್ತು ಶೋಷಣೆ ಆರೋಪಗಳನ್ನು ಎದುರಿಸುತ್ತಿದ್ದ ಭಾರತೀಯ ದಂಪತಿಗೆ ಅಮೆರಿಕದಲ್ಲಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.
ಸಂತ್ರಸ್ತ ಕಾರ್ಮಿಕನಿಗೆ 40,000 ಡಾಲರ್ (ಸುಮಾರು 26 ಲಕ್ಷ ರೂಪಾಯಿ) ಪರಿಹಾರ ನೀಡುವಂತೆಯೂ ಅಮೆರಿಕದ ನೆಬ್ರಾಸ್ಕದ ಕಿಂಬಾಲ್ ನಿವಾಸಿಗಳಾಗಿರುವ ವಿಷ್ಣುಭಾಯ್ ಚೌಧರಿ (50) ಮತ್ತು ಲೀಲಾಬಹೆನ್ ಚೌಧರಿ (44) ದಂಪತಿಗೆ ನ್ಯಾಯಾಲಯವೊಂದು ಆದೇಶ ನೀಡಿದೆ. ಜೈಲುಶಿಕ್ಷೆ ಮುಗಿದ ಬಳಿಕ ಗಡಿಪಾರು ಸಾಧ್ಯತೆಯನ್ನು ಅವರು ಎದುರಿಸುತ್ತಿದ್ದಾರೆ.
ಅಕ್ರಮವಾಗಿ ಅಮೆರಿಕಕ್ಕೆ ಕರೆತರಲಾದ ಭಾರತೀಯರೊಬ್ಬರನ್ನು 2011 ಅಕ್ಟೋಬರ್ ಮತ್ತು 2013 ಫೆಬ್ರವರಿ ನಡುವಿನ ಅವಧಿಯಲ್ಲಿ ಕಿಂಬಾಲ್‌ನ ಹೊಟೇಲೊಂದರಲ್ಲಿ ವಾರದ ಏಳು ದಿನವೂ ಅವಧಿ ಮೀರಿ ದುಡಿಸಿದ ಆರೋಪವನ್ನು ಅವರು ಎದುರಿಸುತ್ತಿದ್ದರು.
ಕಾರ್ಮಿಕನಿಗೆ ದಂಪತಿ ವೇತನ ನೀಡುತ್ತಿರಲಿಲ್ಲ ಹಾಗೂ ಆತನಿಗೆ ಹಲ್ಲೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಕೊನೆಗೂ ಅಲ್ಲಿಂದ ತಪ್ಪಿಸಿಕೊಂಡ ಸಂತ್ರಸ್ತ ಪೊಲೀಸರಿಗೆ ಮಾಹಿತಿ ನೀಡಿದರು.





