ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆ: ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕ ಉದ್ಘಾಟನೆ

ಬಂಟ್ವಾಳ, ಮಾ.21: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವಿವಿಧ ಸೌಲಭ್ಯಗಳನ್ನು ಒದಗಿಸಲು ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕ ಬಂಟ್ವಾಳ ತಾಲೂಕಿನಲ್ಲಿ ಆರಂಭಗೊಂಡಿದೆ.
ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಘಟಕವನ್ನು ಉದ್ಘಾಟಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಸ್ಪತ್ರೆಯಲ್ಲಿ ಘಟಕ ಸ್ಥಾಪಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುವುದು. ಯಾವುದಾದರೂ ತೀವ್ರತರದ ದೌರ್ಜನ್ಯ ಪ್ರಕರಣ ದಾಖಲಾದಲ್ಲಿ, ಸ್ಥಳೀಯ ಸಾಂತ್ವನ ಕೇಂದ್ರದ ಸಮಾಲೋಚಕರಿಂದ ಸಮಾಲೋಚನೆಯನ್ನು ಕೈಗೊಂಡು ಎಲ್ಲ ಅಗತ್ಯ ಸೌಲಭ್ಯಗಳನ್ನು ಘಟಕದಲ್ಲಿ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ತಾಪಂ ಇಒ ರಾಜಣ್ಣ, ತಾಲೂಕು ವೈದ್ಯಾಧಿ ಕಾರಿ ಡಾ.ದೀಪಾ ಪ್ರಭು, ಪಬ್ಲಿಕ್ ಪ್ರಾಸಿಕ್ಯೂಟರ್ ಅಲಿ, ಸಿಡಿಪಿಒ ಮಲ್ಲಿಕಾ, ಸುಧಾ ಜೋಷಿ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಅಧಿಕಾರಿಗಳಾದ ಗಾಯತ್ರಿ ಕಂಬಳಿ, ಪುರಸಭೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಹಿರಿಯ ಮೇಲ್ವಿಚಾರಕಿ ಬಿ. ಭಾರತಿ ನಿರೂಪಿಸಿದರು.







