ಮೇಲೊಬ್ಬ ಮಾಯಾವಿ ಎನ್ನಲಿದ್ದಾರೆ ಸಂಚಾರಿ ವಿಜಯ್

ರಾ
ಷ್ಟ್ರಪ್ರಶಸ್ತಿ ಪುರಸ್ಕೃತ ಸ್ಯಾಂಡಲ್‌ವುಡ್ ನಟ ಸಂಚಾರಿ ವಿಜಯ್, ಕೈತುಂಬಾ ಚಿತ್ರಗಳಿದ್ದರೂ ಹೊಸ ಹೊಸ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳುವ ಹುಮ್ಮಸ್ಸುಳ್ಳವರಾಗಿದ್ದಾರೆ. ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಲು ದೊರೆಯುವ ಪ್ರತಿಯೊಂದು ಅವಕಾಶವನ್ನು ಆತ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಂಚಾರಿ ವಿಜಯ್ ನಟಿಸಿರುವ ನಾಲ್ಕು ಚಿತ್ರಗಳು ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದ್ದು, ಇನ್ನೂ ನಾಲ್ಕು ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಇನ್ನೂ ಎರಡು ಸ್ಯಾಂಡಲ್‌ವುಡ್ ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ವಿಜಯ್ ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದು, ಅಲ್ಲಿ ಥಿಯೇಟರ್ ಎಂದು ಹೆಸರಿನ ಚಿತ್ರದಲ್ಲಿ ನಟಿಸಿದ್ದಾರೆ.
ಮನ್ಸೊರೆ ನಿರ್ದೇಶನದ ‘ನಾತಿ ಚರಾಮಿ’ ಚಿತ್ರದಲ್ಲಿ ನಟಿಸಿರುವ ಸಂಚಾರಿ ವಿಜಯ್, ಈಗ ‘ಮೇಲೊಬ್ಬ ಮಾಯಾವಿ’ ಎಂಬ ಚಿತ್ರಕ್ಕೂ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದ ಮೂಲಕ ಪತ್ರಕರ್ತ ನವೀನ್ ಕೃಷ್ಣ ಅವರು ನಿರ್ದೇಶಕನ ಪಟ್ಟವನ್ನು ಅಲಂಕರಿಸಲಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಅವರು ಮೇಲೊಬ್ಬ ಮಾಯಾವಿಗೆ ಚಿತ್ರಕಥೆ,ಸಂಭಾಷಣೆ ಹಾಗೂ ಹಾಡುಗಳನ್ನು ಬರೆದಿದ್ದಾರೆ. ಜೊತೆಗೆ ಸ್ವಲ್ಪ ಮಟ್ಟಿಗೆ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲೂ ನಟಿಸಿದ್ದಾರೆ.
ಮೇಲೊಬ್ಬ ಮಾಯಾವಿಯ ಪೋಸ್ಟರ್ ಈಗಾಗಲೇ ಅಂತರ್ಜಾಲ ತಾಣಗಳಲ್ಲಿ ಶೇರ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಚಂದ್ರಚೂಡ್ ಜೊತೆ ಹಗ್ಗದಿಂದ ಕಟ್ಟಿಹಾಕಲ್ಪಟ್ಟಿರುವ ವಿಜಯ್, ಸೆಲ್ಫಿ ತೆಗೆದುಕೊಳ್ಳುತ್ತಿರುವ ಈ ಪೋಸ್ಟರ್ ವಿಶಿಷ್ಟವಾಗಿ ಮೂಡಿಬಂದಿದೆ. ಮಂಗಳೂರಿನಲ್ಲಿ ನಡೆದ ಕೆಲವು ನೈಜ ಘಟನೆಗಳಿಂದ ಈ ಚಿತ್ರ ಸ್ಫೂರ್ತಿ ಪಡೆದಿದೆಯೆಂದೂ ಹೇಳಲಾಗುತ್ತಿದೆ.
ಆದಾಗ್ಯೂ ನಟ ಸಂಚಾರಿ ವಿಜಯ್ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲವಾದರೂ, ಈ ಚಿತ್ರ ಹಸಿವು ಹಾಗೂ ಬಡತನದ ಕುರಿತಾಗಿದೆಯೆಂಬ ಸಣ್ಣ ಸುಳಿವೊಂದನ್ನು ಅವರು ನೀಡಿದ್ದಾರೆ. ‘ಮೇಲೊಬ್ಬ ಮಾಯಾವಿ’ ಎಪ್ರಿಲ್ 10ರಿಂದ ಶೂಟಿಂಗ್ ಆರಂಭಿಸಲಿದ್ದು, ಆನಂತರ ಈ ಚಿತ್ರದ ಬಗ್ಗೆ ಇನ್ನಷ್ಟು ವಿವರಗಳು ಹೊರಬೀಳಲಿವೆ.







