ಶಿಫಾರಸಿಗಿಂತ ಹೆಚ್ಚು ಕನಿಷ್ಠ ವೇತನ ಹೆಚ್ಚಳಕ್ಕೆ ಸರಕಾರದ ನಕಾರ: ಮುಷ್ಕರಕ್ಕೆ ನೌಕರರ ಚಿಂತನೆ
ಏಳನೇ ವೇತನ ಆಯೋಗ
ಹೊಸದಿಲ್ಲಿ,ಮಾ.24: ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಮೀರಿ ಯಾವುದೇ ಕನಿಷ್ಠ ವೇತನ ಹೆಚ್ಚಳವನ್ನು ಸರಕಾರವು ಪರಿಗಣಿಸುತ್ತಿಲ್ಲ ಎಂದು ಸಹಾಯಕ ವಿತ್ತಸಚಿವ ಪಿ.ರಾಧಾಕೃಷ್ಣನ್ ಅವರು ಲೋಕಸಭೆಯಲ್ಲಿ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ನಡೆಸಲು ನೌಕರರ ಸಂಘಗಳು ಚಿಂತನೆ ನಡೆಸಿವೆ ಎಂದು ವರದಿಗಳು ತಿಳಿಸಿವೆ.
ರಾಷ್ಟ್ರೀಯ ಜಂಟಿ ಕ್ರಿಯಾ ಮಂಡಳಿ(ಎನ್ಜೆಎಸಿ)ಯು ಮುಷ್ಕರದ ಬೆದರಿಕೆಯನ್ನೊಡ್ಡಿದೆ ಎಂದು ವರದಿಯು ಹೇಳಿದೆ.
ಸರಕಾರದ ನಿರ್ಧಾರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಎನ್ಜೆಎಸಿಯ ಶಿವಗೋಪಾಲ ಮಿಶ್ರಾ ಅವರು, ಹೆಚ್ಚಿನ ಕನಿಷ್ಠ ವೇತನಕ್ಕಾಗಿ ಹೋರಾಟವು ಮುಂದುವರಿಯಲಿದೆ ಎಂದು ತಿಳಿಸಿದರು ಎಂದು ವರದಿಯು ಹೇಳಿದೆ. ಮಿಶ್ರಾ ಅವರು ಕೇಂದ್ರ ಸರಕಾರಿ ನೌಕರರ ಪರವಾಗಿ ಏಳನೇ ವೇತನ ಆಯೋಗದ ಶಿಫಾರಸುಗಳ ಕುರಿತು ಮಾತುಕತೆಗಳ ನೇತೃತ್ವ ವಹಿಸಿದ್ದರು.
ಏಳನೇ ವೇತನ ಆಯೋಗವು ಎಲ್ಲ ಮುಖ್ಯವಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡಿದ್ದು, ಮಾಸಿಕ 18,000 ರೂ.ಕನಿಷ್ಠ ವೇತನ ಮತ್ತು 2.57 ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಅದರ ನಿರ್ದಿಷ್ಟ ಶಿಫಾರಸುಗಳನ್ನು ಆಧರಿಸಿ ನಿಗದಿಗೊಳಿಸಲಾಗಿದೆ. ಹೀಗಾಗಿ ಸದ್ಯ ಅದರಲ್ಲಿ ಯಾವುದೇ ಬದಲಾವಣೆ ಸರಕಾರದ ಪರಿಗಣನೆಯಲ್ಲಿಲ್ಲ ಎಂದು ರಾಧಾಕೃಷ್ಣನ್ ಎಸ್ಪಿ ಸಂಸದ ನೀರಜ್ ಶೇಖರ್ ಅವರ ಪ್ರಶ್ನೆಗೆ ನೀಡಿದ್ದ ಉತ್ತರದಲ್ಲಿ ತಿಳಿಸಿದ್ದರು.
ಮಾಸಿಕ ಕನಿಷ್ಠ ವೇತನವನ್ನು 21,000 ರೂ.ಗೆ ಮತ್ತು ಫಿಟ್ಮೆಂಟ್ ಫ್ಯಾಕ್ಟರ್ನ್ನು 3ಕ್ಕೆ ಹೆಚ್ಚಿಸಬೇಕು ಎನ್ನುವುದು ನೌಕರರ ಬೇಡಿಕೆಯಾಗಿದೆ.