ಭಟ್ಕಳ: ಸಜ್ಜಾದ್ ನೋಮಾನಿ ಮೇಲಿನ ದೇಶದ್ರೋಹ ಪ್ರಕರಣ ಹಿಂಪಡೆಯಲು ಎಸ್.ಡಿ.ಪಿ.ಐ ಒತ್ತಾಯ

ಭಟ್ಕಳ, ಮಾ. 24: ವಿದ್ವಾಂಸ ಹಝ್ರತ್ ಮೌಲಾನ ಸಜ್ಜಾದ್ ನೋಮಾನಿಯವರು ಈ ದೇಶದಲ್ಲಿ ಶಾಂತಿ ಸ್ಥಾಪನೆಗಾಗಿ, ದುರ್ಬಲ ವರ್ಗಗಳ ಹಿತಕ್ಕಾಗಿ ಹಗಲಿರುಳು ಹೋರಾಟ ಮಾಡುತ್ತಿದ್ದು ಇಂತಹ ವ್ಯಕ್ತಿಯ ಮೇಲೆ ರಾಜಕೀಯ ದುರುದ್ಧೇಶದಿಂದಾಗಿ ದೇಶದ್ರೋಹದ ನಕಲಿ ಪ್ರಕರಣ ದಾಖಲಿಸಿದ್ದು ಇದನ್ನು ಕೂಡಲೆ ಹಿಂಪಡೆಯುವಂತೆ ಭಟ್ಕಳದ ಎಸ್.ಡಿ.ಪಿ.ಐ ವತಿಯಿಂದ ರಾಷ್ಟ್ರಪತಿಯನ್ನು ಮನವಿ ಮಾಡುವ ಮೂಲಕ ಒತ್ತಾಯಿಸಲಾಯಿತು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಯ ಕಾರ್ಯಕರ್ತರು ಮೌಲಾನ ನೋಮಾನಿಯವರು ದೇಶದಲ್ಲಿ ಶಾಂತಿ, ಸಹೋದರತೆಯನ್ನು ನೆಲೆಗೊಳಿಸಲು ನಿರಂತರ ಹೋರಾಟ ನಡೆಸುತ್ತಿದ್ದಾರೆ. ದೇಶ ದ್ರೋಹವಾಗುವಂತಹ ಯಾವುದೇ ಹೇಳಿಕೆಗಳನ್ನು ಅವರು ನೀಡಿರುವುದಿಲ್ಲ. ಆದರೆ ರಾಜಕೀಯ ದುರುದ್ದೇಶ ಮತ್ತು ಪ್ರತಿಕಾರ ಮನೋಭಾವನೆಯಿಂದಾಗಿ ಅವರ ವಿರುದ್ಧ ದೇಶದ್ರೋಹದ ಆರೋಪವನ್ನು ಮಾಡಿ ಪ್ರಕರಣ ದಾಖಲಿಸಿದ್ದು ಇದನ್ನು ಕೂಡಲೇ ಹಿಂಪಡೆಯಬೇಕು ಮತ್ತು ದೇಶದ್ರೋಹ ದಾಖಲಿಸಿದ ವ್ಯಕ್ತಿಯನ್ನು ಬಂಧಿಸಿ ಕಾನೂನು ಕ್ರಮಜರಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ವಸೀಮ್ ರಿಝ್ವಿ ಎಂಬ ರಾಜಕೀಯ ದುಷ್ಟಕೂಟದ ವ್ಯಕ್ತಿಯೊಬ್ಬ ತನ್ನ ರಾಜಕೀಯ ಸಾಮಾಥ್ಯವನ್ನು ಬಳಸಿಕೊಂಡು ಇಸ್ಲಾಮಿಕ್ ವಿದ್ವಾಂಸರ ವಿರುದ್ಧ ಪೊಲೀಸ್ ಇಲಾಖೆಗೆ ಸುಳ್ಳು ಪ್ರಕರಣವನ್ನು ದಾಖಲಿಸುವಂತೆ ಒತ್ತಡ ಹೇರಿದ ಪರಿಣಾಮ ಪೊಲೀಸರು ಮೌಲಾನರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಕ್ಕಾಗಿ ವಸೀಮ್ ರಿಝ್ವಿಯ ವಿರುದ್ಧ ಪೊಲೀಸರು ತನಿಖೆಯನ್ನು ಕೈಗೊಳ್ಳಬೇಕು ಮತ್ತು ಈತನ ಪೂರ್ವಾಪರವನ್ನು ಜಾಲಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಉತ್ತರಕನ್ನಡ ಜಿಲ್ಲಾಧ್ಯಕ್ಷ ಯೂಸೂಫ್, ಜಿಲ್ಲಾ ಕಾರ್ಯದರ್ಶಿ ಝಹೀರ್ ಶೇಖ್, ಅಬ್ದುಲ್ ಅಝೀಮ್, ಸರ್ಫ್ರಾರ್ ಖಾನ್, ಸುಫಿಯಾನ್ ಮತ್ತಿತರು ಉಪಸ್ಥಿತರಿದ್ದರು.







