ಗೂಗಲ್ ಡೂಡಲ್‍ನಿಂದ ಫಾರೂಕ್ ಶೇಖ್ ರಿಗೆ ಗೌರವ

ಮುಂಬೈ, ಮಾ.25: ಬಾಲಿವುಡ್‍ನ ಖ್ಯಾತ ನಟ ಫಾರೂಕ್ ಶೇಖ್ ಅವರನ್ನು ಗೂಗಲ್ ತನ್ನ ಡೂಡಲ್‍ನಲ್ಲಿ ಇಂದು ಸ್ಮರಿಸಿಕೊಂಡಿದೆ. 1948ರ ಮಾರ್ಚ್ 25ರಂದು ಅಮ್ರೋಲಿಯಲ್ಲಿ ಜನಿಸಿದ ಫಾರೂಕ್ ಶೇಖ್ ಅವರ 70ನೇ ಹುಟ್ಟುಹಬ್ಬದ ಅಂಗವಾಗಿ ಗೂಗಲ್ ಈ ಗೌರವ ನೀಡಿದೆ.
'ಚಶ್ಮೆ ಬದ್ದೂರ್', ನೂರಿ, ಶತ್ರಂಜ್ ಕೆ ಖಿಲಾಡಿ, ಉಮ್ರಾವೋ ಜಾನ್ ಮತ್ತಿತರ ಚಿತ್ರಗಳ ಮೂಲಕ ಬಾಲಿವುಡ್‍ನ ಮನೆಮಾತಾಗಿದ್ದ ಶೇಖ್, ಭಾರತೀಯ ಸಿನಿಮಾದ ಕಿರೀಟ ಎಂದೇ ಜನಪ್ರಿಯರಾಗಿದ್ದರು. 1977ರಿಂದ 1989ರ ವರೆಗೆ ಬಾಲಿವುಡ್‍ನಲ್ಲಿ ಸಕ್ರಿಯರಾಗಿದ್ದ ಇವರು, 2008ರಲ್ಲಿ ಮತ್ತೆ ಚಿತ್ರರಂಗಕ್ಕೆ ಪ್ರವೇಶಿಸಿದರು. 2013ರ ಡಿಸೆಂಬರ್ 27ರಂದು ಫಾರೂಕ್ ಶೇಖ್ ನಿಧನರಾದರು.
ಕೇವಲ ಸಿನಿಮಾಗಷ್ಟೇ ಸೀಮಿತವಾಗದ ಶೇಖ್, ಕಿರುತೆರೆಯಲ್ಲೂ ಮಿಂಚಿದ್ದರು. 'ಜೀನಾ ಇಸಿ ಕಾ ನಾಮ್ ಹೈ' ಎಂಬ ಜನಪ್ರಿಯ ಟಾಕ್ ಷೋ ಮೂಲಕ ಶೇಖ್ ಜನಪ್ರಿಯರಾಗಿದ್ದರು, 'ಚಮತ್ಕಾರ್' ಟಿವಿ ಧಾರಾವಾಹಿಯಲ್ಲೂ ಅವರು ನಟಿಸಿದ್ದರು. ಟೆಲಿವಿಷನ್ ಉದ್ಯಮದಲ್ಲಿ 1988ರಿಂದ 2002ರವರೆಗೂ ಸಕ್ರಿಯರಾಗಿದ್ದರು.
ಸಿನಿಮಾ ಮತ್ತು ಟೆಲಿವಿಷನ್ ಜತೆಗೆ ರಂಗಭೂಮಿಯಲ್ಲೂ ಶೇಖ್ ಗುರುತಿಸಿಕೊಂಡಿದ್ದರು. ಖ್ಯಾತ ಕವಿ ಅಮೃತಾ ಪ್ರೀತಮ್ ಮತ್ತು ಗೀತರಚನೆಕಾರ ಸಾಹಿರ್ ಲೂದಿಯಾನ್ವಿ ಅವರ ವ್ಯಕ್ತಿಚಿತ್ರ ಆಧರಿತ 'ತುಮ್ಹಾರಿ ಅಮೃತಾ' ಎಂಬ ಟೆಲಿನಾಟಕದಲ್ಲಿ ಇವರು ಅಮೋಘ ಪ್ರದರ್ಶನ ನೀಡಿದ್ದರು.







