3ನೇ ಟೆಸ್ಟ್: ದಕ್ಷಿಣ ಆಫ್ರಿಕಕ್ಕೆ ಭರ್ಜರಿ ಜಯ

ಕೇಪ್‌ಟೌನ್, ಮಾ.25: ವಿದಾಯದ ಪಂದ್ಯ ಆಡಿದ ಮೊರ್ನೆ ಮೊರ್ಕೆಲ್ ಅವರ ಅಪೂರ್ವ ಬೌಲಿಂಗ್(5-23)ನೆರವಿನಿಂದ ದಕ್ಷಿಣ ಆಫ್ರಿಕ ತಂಡ ಆಸ್ಟ್ರೇಲಿಯ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 322 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ನಾಲ್ಕನೇ ದಿನವಾದ ರವಿವಾರ ಆಸ್ಟ್ರೇಲಿಯ ತಂಡ ಪಂದ್ಯದ ಗೆಲುವಿಗೆ 430 ರನ್ ಕಠಿಣ ಗುರಿ ಪಡೆದಿತ್ತು. ಮೊರ್ಕೆಲ್ ಹಾಗೂ ಕೇಶವ್ ಮಹಾರಾಜ್(2-32) ದಾಳಿಗೆ ಸಿಲುಕಿದ ಆಸೀಸ್ 39.4 ಓವರ್‌ಗಳಲ್ಲಿ ಕೇವಲ 107 ರನ್‌ಗೆ ಆಲೌಟಾಯಿತು. ಆಸೀಸ್ ಪರ ಉಪ ನಾಯಕ ಡೇವಿಡ್ ವಾರ್ನರ್(32), ಬ್ಯಾಂಕ್ರಾಫ್ಟ್(26) ಹಾಗೂ ಮಿಚೆಲ್ ಮಾರ್ಷ್ (16)ಎರಡಂಕೆಯ ಸ್ಕೋರ್ ಗಳಿಸಿದರು.
ಆಫ್ರಿಕ ತಂಡ ಆಸೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಭಾರೀ ರನ್ ಅಂತರದಿಂದ ಜಯ ಸಾಧಿಸಿತು.
ಪಂದ್ಯದಲ್ಲಿ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದ ಮೊರ್ಕೆಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಇದಕ್ಕೆ ಮೊದಲು 5 ವಿಕೆಟ್ ನಷ್ಟಕ್ಕೆ 238 ರನ್‌ನಿಂದ ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕ 373 ರನ್‌ಗೆಆಲೌಟಾಯಿತು. ಎಬಿಡಿ ವಿಲಿಯರ್ಸ್ ನಿನ್ನೆಯ ಮೊತ್ತಕ್ಕೆ ಕೇವಲ 12 ರನ್ ಸೇರಿಸಿ 63 ರನ್(136 ಎಸೆತ, 7 ಬೌಂಡರಿ,1 ಸಿಕ್ಸರ್) ಗಳಿಸಿ ಔಟಾದರು. 29 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಕ್ವಿಂಟನ್ ಡಿಕಾಕ್ 65 ರನ್(97 ಎಸೆತ,8 ಬೌಂಡರಿ,1 ಸಿಕ್ಸರ್) ಗಳಿಸಿದರು. ಡಿವಿಲಿಯರ್ಸ್‌ರೊಂದಿಗೆ 6ನೇ ವಿಕೆಟ್‌ಗೆ 68 ರನ್ ಜೊತೆಯಾಟ ನಡೆಸಿದ ಡಿಕಾಕ್ ಅವರು ಫಿಲ್ಯಾಂಡರ್(52,79 ಎಸೆತ) ಅವರೊಂದಿಗೆ 7ನೇ ವಿಕೆಟ್‌ಗೆ 55 ರನ್ ಜೊತೆಯಾಟ ನಡೆಸಿದರು. ಕಾಗಿಸೊ ರಬಾಡ 20 ರನ್ ಕೊಡುಗೆ ನೀಡಿದರು. ಆಸ್ಟ್ರೇಲಿಯದ ಪರ ಹೇಝಲ್‌ವುಡ್(3-69), ಕಮ್ಮಿನ್ಸ್(3-67) ಹಾಗೂ ಲಿಯೊನ್(3-102) ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.







