ಅನಗತ್ಯ ಸಿಬ್ಬಂದಿಯ ನೇಮಕ ಯಾಕೆ?
ಮಾನ್ಯರೇ,
ಎಲ್ಲಿಗೆ ಸಿಬ್ಬಂದಿ ಬೇಕು, ಅಲ್ಲಿ ನೇಮಕಾತಿ ಇಲ್ಲ. ಎಲ್ಲಿ ಸಿಬ್ಬಂದಿ ಬೇಡ, ಅಲ್ಲಿ ನೇಮಕಾತಿ ಆಗುತ್ತಲೇ ಇರುತ್ತದೆ. ಇದು ನಮ್ಮ ರಾಜ್ಯದ ದುಃಸ್ಥಿತಿ. ನಮ್ಮ ವಿಧಾನಸಭೆಯಲ್ಲಿ ಕೆಲಸ ಇಲ್ಲದಿದ್ದರೂ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ ಎಂಬ ವರದಿ ನಿಜಕ್ಕೂ ಪ್ರಶ್ನಾರ್ಹ. ನಮ್ಮ ವಿಧಾನಸಭಾ ಸಚಿವಾಲಯದಲ್ಲಿ ದೇಶದಲ್ಲೇ ಅತೀ ಹೆಚ್ಚು ಸಿಬ್ಬಂದಿ ಇದ್ದಾರೆ ಎಂಬುದು ದಾಖಲೆಯಲ್ಲಿರುವ ಮಾಹಿತಿ. ಅಂದರೆ ಸಾವಿರಕ್ಕಿಂತಲೂ ಹೆಚ್ಚು ಸಿಬ್ಬಂದಿ ಇಲ್ಲಿದ್ದಾರೆ. ಅದರಲ್ಲಿ ಅರ್ಧದಷ್ಟು ‘ಡಿ’ ಗ್ರೂಪ್ ಸಿಬ್ಬಂದಿಯೇ ಇದ್ದಾರೆ. ಹೀಗಾಗಿ ಹೆಚ್ಚಿನವರಿಗೆ ಮಾಡುವುದಕ್ಕೆ ಕೆಲಸವೇ ಇಲ್ಲ. ಇದರ ಮಧ್ಯೆ ಮತ್ತೆ ನೂರಕ್ಕಿಂತಲೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆದಿದೆ. ಅದು ವ್ಯವಸ್ಥೆಯ ವಿರುದ್ಧವಾಗಿ..! ಕಳೆದ ವರ್ಷದ ನವೆಂಬರ್ 24 ರಂದು 90 ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ನೇಮಕ ಪ್ರಕ್ರಿಯೆ ಆಗಿದ್ದು 166 ಹುದ್ದೆಗಳಿಗೆ..! ಇದು ಹೇಗೆ ಸಾಧ್ಯವಾಯಿತು ಅನ್ನುವುದೇ ಜನರ ಪ್ರಶ್ನೆ.
ಈ ಎಲ್ಲಾ ಸಿಬ್ಬಂದಿ ನೇಮಕಾತಿಯಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ನಗರ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊರತೆ ಇದೆ ಎನ್ನುವ ಸರಕಾರ ವಿಧಾನಸಭಾ ಸಚಿವಾಲಯದಲ್ಲಿ ಮಿತಿಗಿಂತ ಹೆಚ್ಚಿರುವ ಸ್ವೀಪರ್ಗಳು ಹೇಗೆ ಸಿಕ್ಕಿದರು ಎಂಬುದರ ಬಗ್ಗೆ ಉತ್ತರ ಕೊಡಬೇಕು. ಹಾಗೆಯೇ ನೇಮಕಾತಿ ಪ್ರಕ್ರಿಯೆ ಕೇವಲ ವಾರದಲ್ಲಿ ಹೇಗೆ ಮುಗಿಯಿತು..? ನೇಮಕಾತಿಯಲ್ಲಿ ಯಾಕೆ ರೋಸ್ಟರ್ ಪದ್ಧತಿ ಆಳವಡಿಸಿಲ್ಲ..? ಎಷ್ಟು ಮಂದಿ ಎಷ್ಟು ಅಂಕ ಪಡೆದಿದ್ದಾರೆ ಎಂಬುದನ್ನು ಯಾಕೆ ಪ್ರಕಟಗೊಳಿಸಿಲ್ಲ..? ತರಾತುರಿಯಲ್ಲಿ ನೇಮಕಾತಿ ಯಾಕೆ ಮಾಡಲಾಯಿತು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಾಗಿದೆ.