ಇಂಡೋನೇಶ್ಯದಲ್ಲಿ ಪ್ರಬಲ ಭೂಕಂಪ
.jpg)
ಜಕಾರ್ತ (ಇಂಡೋನೇಶ್ಯ), ಮಾ. 26: ಪೂರ್ವ ಇಂಡೋನೇಶ್ಯದ ಸಮುದ್ರದಲ್ಲಿ ಸೋಮವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 6.4ರ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಭೂಕಂಪ ಉಸ್ತುವಾರಿ ಸಂಸ್ಥೆಗಳು ತಿಳಿಸಿವೆ.
ಭೂಕಂಪದ ಬೆನ್ನಲ್ಲೇ ಸುನಾಮಿ ಎಚ್ಚರಿಕೆಯನ್ನು ಹೊರಡಿಸಲಾಯಿತಾದರೂ, ಬಳಿಕ ಎಚ್ಚರಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಯಿತು.
ಭೂಕಂಪವು ಬಂಡ ಸಮುದ್ರದಲ್ಲಿ ಭೂತಳದಿಂದ 171 ಕಿ.ಮೀ. ಆಳದಲ್ಲಿ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೆ ತಿಳಿಸಿದೆ.
ಹಿಂದೂ ಮಹಾಸಾಗರ ಸುನಾಮಿ ಎಚ್ಚರಿಕೆ ಮತ್ತು ತಡೆ ವ್ಯವಸ್ಥೆ (ಐಒಟಿಡಬ್ಲುಎಂಎಸ್)ಯು ಭೂಕಂಪ ಸಂಭವಿಸಿದ ಕೂಡಲೇ ಸುನಾಮಿ ಎಚ್ಚರಿಕೆ ಹೊರಡಿಸಿತು.
ಆದಾಗ್ಯೂ, ಎರಡನೇ ಹೇಳಿಕೆಯನ್ನು ಹೊರಡಿಸಿದ ಅದು, ಹಿಂದೂ ಮಹಾಸಾಗರ ತೀರದಲ್ಲಿರುವ ದೇಶಗಳಿಗೆ ಯಾವುದೇ ಬೆದರಿಕೆಯಿಲ್ಲ ಎಂದು ಹೇಳಿತು.
ಭೂಕಂಪದ ಕೇಂದ್ರ ಬಿಂದು ಮಲುಕು ಪ್ರಾಂತದ ರಾಜಧಾನಿ ಅಂಬನ್‌ನಿಂದ 380 ಕಿ.ಮೀ. ದೂರದಲ್ಲಿರುವ ಬಂಡ ಸಮುದ್ರದ ಕಡಿಮೆ ಜನವಸತಿ ಪ್ರದೇಶದಲ್ಲಿತ್ತು.
ಯಾರೂ ಗಾಯಗೊಂಡಿರುವ ಅಥವಾ ಆಸ್ತಿಪಾಸ್ತಿಗೆ ನಷ್ಟವಾಗಿರುವ ವರದಿಗಳು ಬಂದಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.





