ಮಡಿಕೇರಿ: ಆಶಾ ಕಾರ್ಯಕರ್ತರ ಸೇವೆ ಶ್ಲಾಘನೀಯ; ಆರೋಗ್ಯಾಧಿಕಾರಿ ಮೆಚ್ಚುಗೆ
ಪ್ರಶಸ್ತಿ ಪ್ರದಾನ ಸಮಾರಂಭ

ಮಡಿಕೇರಿ, ಮಾ.26: ಆಶಾ ಎಂಬುದು ನಡೆದಾಡುವ ದೇವರಿದ್ದಂತೆ, ಆರೊಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಎಲ್ಲಾ ಜನರಿಗೆ ತಲುಪಿಸಲು ಆರೋಗ್ಯ ಇಲಾಖೆ ಮತ್ತು ಆರೋಗ್ಯ ಸೇವೆ ಪಡೆಯುವವರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಶ್ಲಾಘಿಸಿದ್ದಾರೆ.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಆಶಾ ಕಾರ್ಯಕರ್ತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಅವರು ಸರಕಾರದಿಂದ ಆರೋಗ್ಯ ಸೇವೆ ಕಲ್ಪಿಸಲು ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಸಮಾಜದ ಆರೋಗ್ಯ ಸೇವೆಯಲ್ಲಿ ಆಶಾ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ. ಸಮಾಜದ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಸೇವೆ ಪಡೆಯಲು ಪ್ರೇರಣೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, 'ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆ ಜೊತೆಗೆ ಆರೋಗ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಆರೋಗ್ಯ ಸೇವೆ ಮಾಡುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಆರೋಗ್ಯ ಮತ್ತು ಸಮಾಜದ ನಡುವೆ ಉತ್ತಮ ಕೊಂಡಿಯಾಗಿ ಆಶಾ ಕಾರ್ಯಕರ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ' ಎಂದು ಅವರು ಹೇಳಿದರು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ನಿಲೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿನ ಆರೋಗ್ಯ ಸೇವೆಯ ಬಗ್ಗೆ ಆಶಾ ಕಾರ್ಯಕರ್ತರ ಮುಖಾಂತರ ಆರೋಗ್ಯ ಇಲಾಖೆಗೆ ಮಾಹಿತಿ ದೊರೆಯುತ್ತದೆ. ಕಾರ್ಯಕ್ರಮದ ಸದುಪಯೋಗವನ್ನು ಜನರಿಗೆ ಮುಟ್ಟಿಸುವ ಕಾರ್ಯ ಮುಂದುವರೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಮಾತನಾಡಿ, ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆಯ ಬೆನ್ನೆಲುಬು. ಗ್ರಾಮೀಣ ಮಟ್ಟದ ಸಮಸ್ಯೆಗಳನ್ನು ಇಲಾಖೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಮನೆ ಮನೆಗೆ ಹೋಗಿ ಆರೋಗ್ಯ ಇಲಾಖೆಯ ಸೇವೆ ತಲುಪಿಸುತ್ತಿದ್ದಾರೆ ಎಂದು ಹೇಳಿದರು.
ಆರೋಗ್ಯ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಆಶಾ ಕಾರ್ಯಕರ್ತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರತಿಯೊಂದು ತಾಲೂಕಿನಿಂದ ಮೂರು ಆಶಾ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗಿದ್ದು, ಪ್ರಥಮ ಸ್ಥಾನದ ಪ್ರಶಸ್ತಿಯು 2500 ನಗದು, ದ್ವಿತೀಯ ಪ್ರಶಸ್ತಿಯು 1500, ತೃತೀಯ ಪ್ರಶಸ್ತಿಯು 1000 ನಗದನ್ನು ಒಳಗೊಂಡಿದೆ.
ಪ್ರಥಮ ಬಹುಮಾನ ಮಡಿಕೇರಿ ತಾಲೂಕಿನ ನಾಪೋಕ್ಲು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಸಾರಮ್ಮ, ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಪ್ರೇಮಾ, ವಿರಾಜಪೇಟೆ ತಾಲೂಕಿನ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಗುಲ್‍ಷದ್ ಇವರು ಪಡೆದುಕೊಂಡರು.
ದ್ವಿತೀಯ ಬಹುಮಾನವನ್ನು ಮಡಿಕೇರಿ ತಾಲೂಕಿನ ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಚಂದ್ರಾವತಿ, ಸೋಮವಾರಪೇಟೆ ತಾಲೂಕಿನ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಸುಮಿತ್ರಾ, ವಿರಾಜಪೇಟೆ ತಾಲೂಕಿನ ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಶಾಂತಿ ಎ.ಜಿ. ಅವರು ಪಡೆದುಕೊಂಡರು.
ತೃತೀಯ ಬಹುಮಾನವನ್ನು ಮಡಿಕೇರಿ ತಾಲೂಕಿನ ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಸುಶೀಲ, ಸೋಮವಾರಪೇಟೆ ತಾಲೂಕಿನ ನಂಜರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಸರಸ್ವತಿ, ವಿರಾಜಪೇಟೆ ತಾಲುಕಿನ ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಸರಸು ಅವರು ಪಡೆದುಕೊಂಡರು.
ಜಿಲ್ಲಾ ಮಟ್ಟದದಲ್ಲಿ ಉತ್ತಮ ಆಶಾ ಕಾರ್ಯಕರ್ತೆಯರು ಪ್ರಥಮ ಬಹುಮಾನ ಐದು ಸಾವಿರವನ್ನು ವಿರಾಜಪೇಟೆ ತಾಲೂಕಿನ ಬಾಳಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಸುಮನ ಪಿ.ಯು, ದ್ವಿತೀಯ ಬಹುಮಾನ ಮೂರು ಸಾವಿರ ನಗದನ್ನು ಮಡಿಕೇರಿ ತಾಲೂಕಿನ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಸರೋಜಾ, ತೃತೀಯ ಬಹುಮಾನ ಎರಡು ಸಾವಿರ ನಗದನ್ನು ಸೋಮವಾರಪೇಟೆ ತಾಲೂಕಿನ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಗೀತಾ ವಿ. ಅವರು ಪಡೆದುಕೊಂಡರು.
ಜಿಲ್ಲಾ ಮಟ್ಟದ ಉತ್ತಮ ಆಶಾ ಸುಗಮಕಾರರು ಪ್ರಥಮ ಬಹುಮಾನ ಐದು ಸಾವಿರವನ್ನು ಸೋಮವಾರಪೇಟೆ ತಾಲೂಕಿನ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಗೀತಾ ರಾಜೇಂದ್ರ, ದ್ವಿತೀಯ ಬಹುಮಾನ ಮೂರು ಸಾವಿರ ನಗದನ್ನು ವಿರಾಜಪೇಟೆ ತಾಲೂಕಿನ ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ವನಿತಾ ಬಿ.ವಿ., ತೃತೀಯ ಬಹುಮಾನ ಎರಡು ಸಾವಿರ ನಗದನ್ನು ಮಡಿಕೇರಿ ತಾಲೂಕಿನ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಪೂರ್ಣಿಮಾ. ಅವರು ಪಡೆದುಕೊಂಡರು.
ಕಾರ್ಯಕ್ರಮದ ಪ್ರಾರ್ಥನೆಯನ್ನು ಆಶಾ ಕಾರ್ಯಕರ್ತೆ ಮೀನಾಕ್ಷಿ ಮತ್ತು ವೀಣಾ ನೇರವೇರಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಅವರು ಸ್ವಾಗತಿಸಿದರು. ಕಿರಣ್ ಕುಮಾರ್ ಅವರು ನಿರೂಪಿಸಿದರು.







