ತನ್ನದೇ ಕೊಲೆಯ ನಾಟಕವಾಡಿ ಜೈಲು ಸೇರಿದ ಕ್ರಿಕೆಟ್ ಅಭಿಮಾನಿ

ಢಾಕಾ,ಮಾ.27 : ಕ್ರಿಕೆಟ್ ಬೆಟ್ ಒಂದರಲ್ಲಿ ಸೋತು 1800 ಡಾಲರ್ ಪಾವತಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಕೆಂಪು ಹಣ್ಣಿನ ರಸವೊಂದನ್ನು ರಕ್ತವೆಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಕೊಲೆಯ ನಾಟಕವಾಡಿ ಕೊನೆಗೆ ಈಗ ಜೈಲುಗಂಬಿ ಎಣಿಸುತ್ತಿದ್ದಾನೆ.
ಅಡೆಲ್ ಶಿಕ್ದರ್ ಎಂಬ ಹೆಸರಿನ ಈ ಯುವಕನ ಕೊಲೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ 10,000 ಬಾರಿ ಶೇರ್ ಮಾಡಲ್ಪಟ್ಟಿದ್ದು ಪೊಲೀಸರ ಕಣ್ಣಿಗೂ ಇದು ಬಿದ್ದು ಆತನ ಮೃತದೇಹಕ್ಕೆ ಹುಡುಕಾಟ ಆರಂಭಗೊಂಡಿತ್ತು.
ಮಾರ್ಚ್ 18ರಂದು ಬಾಂಗ್ಲಾದೇಶ ಮತ್ತು ಭಾರತದ ನಡುವೆ ನಿದಹಸ್ ಟ್ರೋಫಿಗಾಗಿ ನಡೆದ ಪಂದ್ಯದಲ್ಲಿ ತನ್ನ ದೇಶ ಸೋತ ಕಾರಣ ಆತ 1,50,000 ಟಕಾ ( 1,800 ಡಾಲರ್) ಬೆಟ್ ಸೋತಿದ್ದ. ಆತ ಚಲನಚಿತ್ರ ಮೇಕಪ್ ಕಲಾವಿದನೊಬ್ಬನ ಸಹಾಯದಿಂದ ತನ್ನ ಕೊಲೆ ನಡೆದಂತೆ ಬಿಂಬಿಸಿದ್ದ.
ರಕ್ತದ ಬಣ್ಣ ಕಾಣಿಸಲು ಕೆಂಪು ಬಣ್ಣದ ಹಣ್ಣಿನ ರಸದ ಸಿರಪ್ ಉಪಯೋಗಿಸಿದ್ದ ಆತನ ಕತ್ತು ಸೀಳಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ತಾನು ಕ್ರಿಕೆಟ್ ಬೆಟ್ ಯಾರ ಕೈಯ್ಯಲ್ಲಿ ಸೋತಿದ್ದೆನೋ ಆ ವ್ಯಕ್ತಿಗೆ ಅನಾಮಿಕವಾಗಿ ಈ ವೀಡಿಯೋವನ್ನು ಆತ ಕಳುಹಿಸಿದ್ದ.
ಬಾಂಗ್ಲಾದೇಶ-ಶ್ರೀಲಂಕಾ ಸೆಮಿಫೈನಲ್ ವೇಳೆ ಬೆಟ್ಟಿಂಗ್ ನಡೆಸಿ ಗೆದ್ದಿದ್ದ ಆತ ಅದೇ ವ್ಯಕ್ತಿಯಿಂದ 40,000 ಟಕಾ ಪಡೆದಿದ್ದ. ಅದೇ ಹಣ ಉಪಯೋಗಿಸಿ ಫೈನಲ್ ನಲ್ಲಿ ದೊಡ್ಡ ಬೆಟ್ಟಿಂಗ್ ನಡೆಸಿ ಆತ ಕೈ ಸುಟ್ಟುಕೊಂಡು ಇಂತಹ ಕೃತ್ಯಕ್ಕೆ ಕೈ ಹಾಕಿದ್ದ.
ತನ್ನ ಕಿರಿಯ ಸೋದರನಿಗೆ ಆತ ಬೇರೆಯೇ ದನಿಯಲ್ಲಿ ಕರೆ ಮಾಡಿ ತನ್ನ ಮೃತದೇಹ ಚಿತ್ತಗಾಂಗ್ ನಲ್ಲಿದೆ ಎಂದು ತಿಳಿಸಿದ್ದ. ಆದರೆ ಆತನ ಕುಟುಂಬ ಅಲ್ಲಿ ಹುಡುಕಾಡಿ ಏನೂ ದೊರೆಯದೇ ಇದ್ದಾಗ ಪೊಲೀಸ್ ದೂರು ದಾಖಲಿಸಿತ್ತು.
ಪೊಲೀಸರು ಮೇಕ್ ಅಪ್ ಕಲಾವಿದನನ್ನು ಬಂಧಿಸಿದ ನಂತರ ನಿಜ ವಿಚಾರ ಹೊರ ಬಂದಿತ್ತು. ಮರು ದಿನ ಆರೋಪಿ ಶಿಕ್ದರ್ ನನ್ನು ಫರೀದ್ ಪುರದಲ್ಲಿ ಬಂಧಿಸಲಾಯಿತು.







