ಕಾರನ್ನು ಬಿಟ್ಟು ಬಸ್ಸು ಹತ್ತಿದ ಶಾಸಕಿ ಶಕುಂತಳಾ ಶೆಟ್ಟಿ
ನೀತಿ ಸಂಹಿತೆಗೆ ಗೌರವ

ಪುತ್ತೂರು, ಮಾ. 27: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುತ್ತಿದ್ದ ವೇಳೆ ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಮಾಹಿತಿ ಅರಿತ ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯಾಗಿರುವ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರು ಸರ್ಕಾರದ ಕಾರನ್ನು ಬಿಟ್ಟು, ಬಸ್ಸಿನಲ್ಲಿ ಪುತ್ತೂರಿಗೆ ಆಗಮಿಸಿದ ಘಟನೆ ಮಂಗಳವಾರ ನಡೆದಿದೆ.
ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾ. 26 ರಿಂದ 29ರ ತನಕ ರೈತ ಜಾಗೃತಿ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇಂದು ಪಾಣಾಜೆಯಲ್ಲಿ ರೈತ ಜಾಗೃತಿ ಸಮಾವೇಶ ನಡೆದಿದ್ದು, ಶಾಸಕಿ ಶಕುಂತಳಾ ಶೆಟ್ಟಿ ಅವರು ಈ ಸಮಾವೇಶದಲ್ಲಿ ಭಾಗವಹಿಸಿ, ಮಾತನಾಡಿದ್ದರು.
ಸಮಾವೇಶ ಮುಗಿಯುವ ವೇಳೆ ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ದಿನಾಂಕವೂ ಘೋಷಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಾರನ್ನು ಬಳಸಿದರೆ ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂಬ ಕಾರಣಕ್ಕೆ ದಾರಿ ನಡುವೆ ಕಾರಿನಿಂದ ಇಳಿದು ಕಾರನ್ನು ಚಾಲಕನಲ್ಲಿ ಪುತ್ತೂರಿಗೆ ತರುವಂತೆ ತಿಳಿಸಿ, ಖಾಸಗಿ ಬಸ್ ಮೂಲಕ ಪುತ್ತೂರಿಗೆ ಆಗಮಿಸಿದರು.
ಶಾಸಕಿಯೊಂದಿಗೆ ಪಕ್ಷದ ಕೆಲವು ಮುಖಂಡರೂ ಬಸ್ಸಲ್ಲೇ ಆಗಮಿಸಿದರು. ಈ ಕುರಿತು ಹೇಳಿಕೆ ನೀಡಿದ ಶಾಸಕಿ ಕಾಂಗ್ರೆಸ್ ಎಂದೂ ಈ ದೇಶದ ಕಾನೂನಿಗೆ ಗೌರವ, ಬೆಲೆ ಕೊಡುವ ಪಕ್ಷವಾಗಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಸರಕಾರದ ಕಾರನ್ನು ಬಳಸುವುದು ತಪ್ಪು ಎಂಬ ಕಾರಣಕ್ಕೆ ಬಸ್ಸಲ್ಲಿ ಪ್ರಯಾಣ ಮುಂದುವರೆಸಿದೆ ಎಂದು ತಿಳಿಸಿದ್ದಾರೆ.







