ಇಂದಿನಿಂದ ನೀತಿ ಸಂಹಿತೆ ಜಾರಿ
ಮೇ.12ರಂದು ರಾಜ್ಯ ವಿಧಾನಸಭಾ ಚುನಾವಣೆ

ಬೆಂಗಳೂರು, ಮಾ.27: 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಮೇ 12ರಂದು ನಿಗದಿಪಡಿಸಿ ಕೇಂದ್ರ ಚುನಾವಣಾ ಆಯೋಗ ಘೋಷಿಸಿರುವುದರಿಂದ ತಕ್ಷಣದಿಂದಲೆ ರಾಜ್ಯದಲ್ಲಿ ನೀತಿ ಸಂಹಿತಿ ಜಾರಿಗೆ ಬಂದಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಚುನಾವಣಾ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ, ಸರಕಾರಿ ಇಲಾಖೆ, ಜನಪ್ರತಿನಿಧಿಗಳು ಹಾಗೂ ಮಾಧ್ಯಮಗಳಿಗೆ ಚುನಾವಣಾ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಗೊಳ್ಳಲಿದೆ ಎಂದು ತಿಳಿಸಿದರು.
ಗ್ರಾಮಪಂಚಾಯತ್ ಸೇರಿದಂತೆ ಸರಕಾರದ ಅನುದಾನ ಪಡೆದಿರುವ ಯಾವುದೆ ಸಂಸ್ಥೆಗೆ ಸೇರಿದ ವಾಹನಗಳು ಚುನಾವಣಾ ಪ್ರಚಾರದಲ್ಲಿ ಬಳಕೆಯಾಗುವಂತಿಲ್ಲ. ಸಚಿವರು ತಮ್ಮ ಮನೆಯಿಂದ ಕಚೇರಿಗೆ ಮಾತ್ರ ಸರಕಾರಿ ವಾಹನವನ್ನು ಬಳಸಬಹುದು. ಉಳಿದ ಜನಪ್ರತಿನಿಧಿಗಳು ಸರಕಾರಿ ವಾಹನವನ್ನು ಬಳಸುವಂತಿಲ್ಲವೆಂದು ಅವರು ಹೇಳಿದರು.
ಸರಕಾರ ಹೊಸ ಯೋಜನೆಗಳನ್ನು ಘೋಷಿಸುವಂತಿಲ್ಲ. ಯೋಜನೆಗಳನ್ನು ಅನುಷ್ಠಾನಗೊಳಿಸುವಂತಿಲ್ಲ. ಹೊಸ ಫಲಾನುಭವಿಗಳನ್ನು ಗುರುತಿಸುವಂತಿಲ್ಲ. ಆದರೆ, ಈಗಾಗಲೆ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಮುಂದೆವರೆಸಲು ಯಾವುದೆ ಅಭ್ಯಂತರವಿಲ್ಲ ಎಂದು ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದರು.
ಕಟ್ಟುನಿಟ್ಟಿನ ಕಾನೂನು ಸುವ್ಯವಸ್ಥೆ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ 7,010ದೂರುಗಳು ಬಂದಿವೆ. ಅದರಲ್ಲಿ 6,825 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದೇವೆ. ಇನ್ನು 136 ಪ್ರಕರಣಗಳ ವಿಚಾರಣೆ ನಡೆಯುತ್ತಿವೆ ಎಂದು ಅವರು ಹೇಳಿದರು.
ರಾಜ್ಯಾದ್ಯಂತ ದಾಖಲಾಗಿರುವ 42,815 ಜಾಮೀನು ರಹಿತ ಪ್ರಕರಣಗಳ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪರವಾನಿಗೆ ಪಡೆದ ಗನ್ ಸೇರಿದಂತೆ ಮತ್ತಿತರ ಆಯುಧಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಅದೇ ರೀತಿಯಲ್ಲಿ ಪೊಲೀಸ್ ಇಲಾಖೆ 16,046 ಲೀಟರ್ ಮದ್ಯ ಹಾಗೂ ಅಬಕಾರಿ ಇಲಾಖೆ 1,292 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸಲಾಗುತ್ತಿದ್ದು, ಮತ ಚಲಾವಣೆಯನ್ನು ಖಾತ್ರಿಪಡಿಸುವ ವಿವಿ ಪ್ಯಾಟ್ ಯಂತ್ರಗಳನ್ನು ಮತಯಂತ್ರಗಳಿಗೆ ಜೋಡಣೆ ಮಾಡಲಾಗಿದೆ. ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಯ ವೆಚ್ಚವನ್ನು 28 ಲಕ್ಷ ರೂ.ಗಳಿಗೆ ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದರು.
ಚುನಾವಣಾ ನೀತಿ ಸಂಹಿತೆ
ಮಾಡಬಹುದು
-ನೀತಿ ಸಂಹಿತೆ ಜಾರಿಯಾಗುವ ಹಿಂದಿನಿಂದ ನಡೆಯುತ್ತಿದ್ದ ಕಾಮಗಾರಿಗಳು ಮುಂದುವರೆಸಬಹುದು.
-ಬರ, ಪ್ರವಾಹ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಪರಿಹಾರ ನಿಧಿಯನ್ನು ಘೋಷಿಸಬಹುದು.
-ಪೊಲೀಸ್ ಅನುಮತಿಯ ಮೇರೆಗೆ ಸಭೆ ಸೇರಬಹುದು.
-ಜನಪ್ರತಿನಿಧಿಗಳು ಚುನಾವಣಾ ಪ್ರಚಾರದಲ್ಲಿ ತೊಡಗಬಹುದು.
ಮಾಡಬಾರದು
-ಸರಕಾರಿ ಸಾಧನೆಗಳ ಕುರಿತು ಜಾಹೀರಾತು ಪ್ರಕಟಿಸುವಂತಿಲ್ಲ.
-ಜಾತಿ-ಧರ್ಮದ ಹೆಸರಿನಲ್ಲಿ ಮತಗಳನ್ನು ಕೇಳುವಂತಿಲ್ಲ
-ಚುನಾವಣಾ ಪ್ರಚಾರದ ವೇಳೆ ವ್ಯಕ್ತಿಗಳ ಖಾಸಗಿ ಬದುಕಿಗೆ ಧಕ್ಕೆ ತರುವಂತಿಲ್ಲ.
-ಪ್ರಾರ್ಥನಾ ಮಂದಿರಗಳನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುವಂತಿಲ್ಲ.
-ಒಂದು ಪಕ್ಷದವರು ಚುನಾವಣಾ ಸಮಾವೇಶ ಮಾಡುವ ವೇಳೆ ಮತ್ತೊಂದು ಪಕ್ಷದ ಮತದಾರರು ತೊಂದರೆ ಕೊಡಬಾರದು.
-ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕಗಳನ್ನು ಬಳಸಬಾರದು.
ಎ.17ರಂದು ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳುತ್ತದೆ.
ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ ಎ. 24
ನಾಮಪತ್ರ ಪರಿಶೀಲನೆ ಎ. 25
ನಾಮ ಪತ್ರ ಹಿಂದೆಗೆತಕ್ಕೆ ಕೊನೇ ದಿನ ಎ. 27
ಮತದಾನ ಮೇ 12
ಮತ ಎಣಿಕೆ ಮೇ 15







