ಹೈಕಮಾಂಡ್ ನೀಡುವ ಜವಾಬ್ದಾರಿ ನಿರ್ವಹಿಸಲು ಸಿದ್ಧ: ಝಮೀರ್ ಅಹ್ಮದ್‌ಖಾನ್

ಬೆಂಗಳೂರು, ಮಾ.27: ಕಾಂಗ್ರೆಸ್ ಪಕ್ಷಕ್ಕೆ ನಮ್ಮನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸೇರಿದಂತೆ ಎಲ್ಲ ಹಿರಿಯ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್‌ಅಹ್ಮದ್‌ಖಾನ್ ತಿಳಿಸಿದರು.
ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸೇರ್ಪಡೆಯಿಂದ ನನ್ನ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಹೈಕಮಾಂಡ್ ನೀಡುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ನಾನು ಸಿದ್ಧ ಎಂದರು.
ಜನರ ಋಣ ನನ್ನ ಮೇಲಿದೆ, ಅದನ್ನು ಯಾವ ರೀತಿಯಲ್ಲಿ ತೀರಿಸಬೇಕು ಎಂಬುದು ಗೊತ್ತಾಗುತ್ತಿಲ್ಲ. ಜನರೇ ನಮಗೆ ಶಕ್ತಿ ತುಂಬಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ನಾವೆಲ್ಲರೂ ಒಗ್ಗಟ್ಟಾಗಿ ದುಡಿಯುತ್ತೇವೆ ಎಂದು ಅವರು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧ ಎಂದು ಹೇಳಿಕೆ ನೀಡಿರುವುದಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿರುವುದನ್ನು ಗಮನಿಸಿದ್ದೇನೆ. ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಉತ್ತಮವಾದ ತೀರ್ಮಾನವನ್ನು ಅವರು ತೆಗೆದುಕೊಂಡಿದ್ದಾರೆ ಎಂದು ಝಮೀರ್‌ಅಹ್ಮದ್‌ಖಾನ್ ತಿಳಿಸಿದರು.
ದೇವೇಗೌಡ ಒಬ್ಬ ಜಾತ್ಯತೀತ ನಾಯಕ. ಆದರೆ, ಅವರಲ್ಲಿನಶೇ.10ರಷ್ಟು ಗುಣವು ಅವರ ಪುತ್ರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಗೆ ಬಂದಿಲ್ಲ ಎಂಬುದು ಬೇಸರದ ಸಂಗತಿ. ಮೈತ್ರಿ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ದೇವೇಗೌಡ ಕಾಂಗ್ರೆಸ್ ಜೊತೆ ಹೊಂದಾಣಿಕೆ ಸಿದ್ಧ ಎಂದು ಹೇಳಿದ ಬೆನ್ನಲ್ಲೆ ಕುಮಾರಸ್ವಾಮಿ, ಕಾಂಗ್ರೆಸ್ ಜೊತೆ ಹೋಗುವ ಪ್ರಶ್ನೆಯೆ ಉದ್ಭವಿಸುವುದಿಲ್ಲ ಎನ್ನುತ್ತಾರೆ. ಇದು ಏನನ್ನು ಸೂಚಿಸುತ್ತದೆ ಎಂಬುದನ್ನು ನೀವೆ ಊಹಿಸಿಕೊಳ್ಳಿ ಎಂದು ಝಮೀರ್‌ಅಹ್ಮದ್‌ಖಾನ್ ತಿಳಿಸಿದರು.







