ಸಚಿವ ಸಂಪುಟದ ನಿರ್ಧಾರಗಳನ್ನು ತಡೆ ಹಿಡಿಯಬೇಕು: ಶೋಭಾ ಕರಂದ್ಲಾಜೆ

ಬೆಂಗಳೂರು, ಮಾ.27: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಕಳೆದ ಎರಡು ಸಚಿವ ಸಂಪುಟ ಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಚುನಾವಣಾ ಆಯೋಗ ತಡೆ ಹಿಡಿಯಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಮಂಗಳವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 15 ದಿನಗಳಲ್ಲಿ ಹಣಕಾಸು ವ್ಯವಸ್ಥೆ ಇಲ್ಲದೆಯೆ, ಗುತ್ತಿಗೆದಾರರು ಯಾರೆಂಬುದು ಗೊತ್ತಿಲ್ಲದೆಯೆ ಅನೇಕ ಕಾಮಗಾರಿಗಳು ಹಾಗೂ ಯೋಜನೆಗಳನ್ನು ತರಾತುರಿಯಲ್ಲಿ ಜಾರಿಗೊಳಿಸಿದ್ದು, ಇವೆಲ್ಲವನ್ನೂ ಆಯೋಗ ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.
ಕಳೆದ ಎರಡು ದಿನಗಳಲ್ಲಿ ಅನೇಕ ಕಡತಗಳ ವಿಲೇವಾರಿಯಾಗಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಚುನಾವಣೆ ಸಮೀಪಿಸುತ್ತಿರುವಾಗ ವರ್ಗಾವಣೆ ಮಾಡಬಾರದು ಎಂಬ ನಿರ್ದೇಶನವಿದ್ದರೂ ವರ್ಗಾವಣೆ ದಂಧೆ ನಡೆದಿದೆ ಎಂದು ಅವರು ಆರೋಪಿಸಿದರು.
ಕೊನೆಯ ದಿನಗಳಲ್ಲಿ ಎಲ್ಲವನ್ನೂ ದೋಚಲು ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಗಣಿ ಇಲಾಖೆ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾರನ್ನು ರಜೆ ಮೇಲೆ ತೆರಳಲು ಸೂಚಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಎರಡು ವರ್ಷಗಳಿಂದ ಒಂದೇ ಕಡೆ ಇರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ರೈತರ ಆತ್ಮಹತ್ಯೆಗೆ ಪರಿಹಾರ, ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ ಮತ್ತಿತರ ಯೋಜನೆಗಳಿಗೆ ಹಣವಿಲ್ಲ ಎಂದು ಹೇಳುವ ಸರಕಾರ, ಜಾಹೀರಾತುಗಳಿಗೆ ಕೋಟ್ಯಂತರ ರೂ.ಖರ್ಚು ಮಾಡುತ್ತಿದೆ. ಸರಕಾರದ ಪರ ಹೋರ್ಡಿಂಗ್‌ಗಳನ್ನು ಈ ಕೂಡಲೆ ತೆರವುಗೊಳಿಸಲು ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಿಂದ ಕಾನೂನು ಉಲ್ಲಂಘನೆಯಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹಾಗೂ ರಕ್ಷಣೆ ಒದಗಿಸಬೇಕು. ಪೊಲೀಸರನ್ನು ಸರಕಾರ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಸಿಆರ್‌ಪಿಎಫ್ ಇಲ್ಲವೇ ಇತರ ರಾಜ್ಯಗಳ ಪಡೆಗಳನ್ನು ಕರೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಅಮಿತ್ ಶಾ ಯಾತ್ರೆ ಯಶಸ್ವಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಎರಡು ದಿನಗಳ ನಡೆಸಿರುವ ಕರುನಾಡ ಜಾಗೃತಿ ಯಾತ್ರೆ ಯಶಸ್ವಿಯಾಗಿದೆ. ಅಡಿಕೆ, ತೆಂಗು ಬೆಳೆಗಾರರ ಸಮಸ್ಯೆಗಳಿಗೆ ಅವರು ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಚುನಾವಣಾ ದಿನಾಂಕವನ್ನು ಮುಂಚಿತವಾಗಿ ಘೋಷಣೆ ಮಾಡಿರುವ ಆಯೋಗವನ್ನು ಬಿಜೆಪಿ ಅಭಿನಂದಿಸುತ್ತದೆ. ಚುನಾವಣೆ ವಿಳಂಬವಾದಷ್ಟು ಕಾಂಗ್ರೆಸ್‌ನಿಂದ ಆಡಳಿತ ದುರುಪಯೋಗವಾಗುತ್ತಿತ್ತು. ಯಾವುದೇ ಸಮಯದಲ್ಲಿ ಚುನಾವಣೆ ಘೋಷಣೆಯಾದರೂ ಚುನಾವಣೆ ಎದುರಿಸಲು ಪಕ್ಷ ಸಿದ್ಧವಾಗಿದೆ. ಪರೀಕ್ಷೆಗೆ ವರ್ಷವಿಡೀ ವಿದ್ಯಾರ್ಥಿ ತಯಾರಾಗುವಂತೆ ಪಕ್ಷ 2-3 ವರ್ಷಗಳಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಬೂತ್‌ಮಟ್ಟದಲ್ಲಿ ನವಶಕ್ತಿ, ಯಡಿಯೂರಪ್ಪ ಅವರ ಪರಿವರ್ತನಾ ಯಾತ್ರೆ, ಜನಸಂಪರ್ಕ, ಜನಸುರಕ್ಷಾ ಯಾತ್ರೆ, ಬೆಂಗಳೂರು ರಕ್ಷಿಸಿ ಯಾತ್ರೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಿದ ‘ಮುಷ್ಠಿಧಾನ್ಯ’ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.







