ಮಾ.30ರಿಂದ ಪಡುಮಲೆ ಜುಮಾ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ, ಸೌಹಾರ್ದ ಸಂಗಮ
ಪುತ್ತೂರು, ಮಾ. 27: ಸುಮಾರು 800 ವರ್ಷಗಳ ಇತಿಹಾಸವುಳ್ಳ ಪಡುವನ್ನೂರು ಗ್ರಾಮದ ಪಡುಮಲೆ ಜುಮಾ ಮಸೀದಿಯಲ್ಲಿ ನಡೆಸಿಕೊಂಡು ಬರುತ್ತಿರುವ ಆಂಡ್ ನೇರ್ಚೆ, ಮೂರು ದಿನಗಳ ಧಾರ್ಮಿಕ ಉಪನ್ಯಾಸ, ಕೂಟ್ ಪ್ರಾರ್ಥನೆ ಮತ್ತು ಸೌಹಾರ್ದ ಸಂಗಮ ಕಾರ್ಯಕ್ರಮ ಮಾ.30ರಿಂದ ಎ.22ರ ತನಕ ನಡೆಯಲಿದೆ ಎಂದು ಮಸೀದಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಬಡಗನ್ನೂರು ತಿಳಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾ.30ರಂದು ಸಂಜೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಪಡುಮಲೆ ಜಮಾಅತ್ ಅಧ್ಯಕ್ಷ ಕೆ.ಪಿ.ಮಹಮ್ಮದ್ ಕುಂಞಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಮಾ.31ಕ್ಕೆ ಕಾಸರಗೋಡು ಜಾಮಿಅ ಸಆದಿಯ ಅರೆಬಿಯ ಕಾಲೇಜಿನ ಪ್ರಾಂಶುಪಾಲ ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಎ.1ಕ್ಕೆ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದ್ದು ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಮಾಜಿ ಸಚಿವರೂ, ಶಾಸಕರೂ ಆಗಿರುವ ವಿನಯ ಕುಮಾರ್ ಸೊರಕೆ, ಶಾಸಕಿ ಶಕುಂತಳಾ ಶೆಟ್ಟಿ ಸೇರಿದಂತೆ ಅನೇಕ ಜಿ.ಪಂ, ತಾ.ಪಂ ಗ್ರಾ.ಪಂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಖತೀಬ್ ಅಹಮದ್ ಪೂಕೋಯ ತಂಙಳ್ ದುವಾಃ ಆಶೀರ್ವಚನ ನೀಡಲಿದ್ದಾರೆ. ಜಮಾಅತ್‌ನ ಖತೀಬ್ ಶಂಸುದ್ದೀನ್ ದಾರಿಮಿ ಉದ್ಘಾಟಿಸಲಿದ್ದಾರೆ. ಕಾಸರಗೋಡಿನ ಇಬ್ರಾಹಿಂ ಖಲೀಲ್ ಹುದವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸ್ಥಳೀಯ ಮಸೀದಿಗಳ ಖತೀಬ್‌ರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪಡುಮಲೆಯಲ್ಲಿ ಮಸೀದಿ ಮತ್ತು ದೈವಸ್ಥಾನ ಕೂಗಳತೆ ದೂರದಲ್ಲಿದ್ದು ಎರಡೂ ಧಾರ್ಮಿಕ ಕೇಂದ್ರಗಳಲ್ಲಿ ಸೌಹಾರ್ದತೆ ಬೆಳೆದಿದ್ದು, ಇಲ್ಲಿನ ಎಲ್ಲಾ ಕಾರ್ಯ ಕ್ರಮಗಳಲ್ಲೂ ಜಾತಿ ಧರ್ಮಗಳ ಬೇಧವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಡುಮಲೆ ಜಮಾಅತ್‌ನ ಖತೀಬ್ ಶಂಸುದ್ದೀನ್ ದಾರಿಮಿ, ಉಪಾಧ್ಯಕ್ಷ ಬದ್ರುದ್ದೀನ್ ಹಾಜಿ, ಕೋಶಾಧಿಕಾರಿ ಆದಂ ಹಾಜಿ ಡೆಂಬಲೆ, ಸದಸ್ಯ ಆಲಿ ಕುಂಞಿ ಹಾಜಿ ಪಿಳಿಪುಡೆ ಉಪಸ್ಥಿತರಿದ್ದರು.





