ಕಾಪು ಮಾರಿಪೂಜೆ: ಸ್ವಚ್ಛತೆಯ ಜಾಗೃತಿ; ಗಮನಸೆಳೆದ ಪುರಸಭೆ

ಕಾಪು, ಮಾ. 27: ಮಂಗಳವಾರ ಸಂಜೆಯಿಂದ ನಡೆಯುವ ಕಾಲಾವಧಿ ಸುಗ್ಗಿ ಮಾರಿಪೂಜಾ ಮಹೋತ್ಸವಕ್ಕೆ ಕಾಪು ಪುರಸಭೆ ಸ್ವಚ್ಛತೆಯ ಬಗ್ಗೆ ಜಾಗೃತಿ ಹಾಗೂ ಮಹತ್ವ ನೀಡಿದೆ.
ಕಾಪುವಿನ ಮೂರು ಮಾರಿಗುಡಿಯಲ್ಲಿ ಮಂಗಳವಾರ ಸಂಜೆಯಿಂದ ಆರಂಭಗೊಂಡು ಬುಧವಾರದವರೆಗೆ ಸುಗ್ಗಿ ಮಾರಿಪೂಜೆ ನಡೆಯಲಿದೆ. ಮಾರಿಗುಡಿಯ ಹಾಗೂ ಪೇಟೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಸುಮಾರು 25 ಪೌರಕಾರ್ಮಿಕರನ್ನು ನಿಯೋಜಿಸಲಾಗಿದೆ. ಬೆಳಗ್ಗೆ 5.30ರಿಂದಲೇ ಪೌರಕಾರ್ಮಿಕರು ಸ್ವಚ್ಛತೆಯನ್ನು ಆರಂಭಿಸಿದ್ದಾರೆ. ಘನ-ದ್ರವ ತ್ಯಾಜ್ಯಗಳನ್ನು ಬೇರ್ಪಡಿಸಿ ಕಸದ ಬುಟ್ಟಿಯಲ್ಲಿ ಹಾಕುವ ಬಗ್ಗೆ ಹಾಗೂ ಸ್ವಚ್ಛತೆಯನ್ನು ಕಾಪಾಡುವ ಪ್ರಚಾರ ಫಕಗಳನ್ನು ಎಲ್ಲೆಡೆ ಅಳವಡಿಸಲಾಗಿದೆ. ಕೋಳಿ ಹಾಗೂ ಮಾಂಸ ಮಾರಾಟಗಾರರು ಹಾಗೂ ಸಾರ್ವಜನಿಕರಿಗೆ ಸ್ವಚ್ಚತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ಜಾಗೃತಿ ಮೂಡಿಸುತಿದ್ದಾರೆ.
ಸ್ವಚ್ಛತೆಯ ಜತೆಗೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ಬಳಸಿದಲ್ಲಿ ದಂಡ ವಿಧಿಸಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದ್ದಾರೆ.





