ರಾಜ್ಯದ ಮತದಾರರ ಸಂಖ್ಯೆಯಲ್ಲಿ ಶೇ.9 ರಷ್ಟು ಹೆಚ್ಚಳ: ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್

ಬೆಂಗಳೂರು, ಮಾ.27: 2018ನೆ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 4,96,82,351 ಮತದಾರರಿದ್ದು, ಇದರಲ್ಲಿ 2,52,05,820 ಪುರುಷರು ಹಾಗೂ 2,44,71,979 ಮಹಿಳೆಯರು ಮತ್ತು 4,552 ತೃತೀಯ ಲಿಂಗಿಗಳು ಒಳಗೊಂಡಿರುತ್ತಾರೆ. ಕಳೆದ ರಾಜ್ಯ ವಿಧಾನಸಭೆ ಚುನಾವಣೆಗೆ ಹೋಲಿಸಿದ್ದಲ್ಲಿ ಶೇ.9ರಷ್ಟು ಮತದಾರರು ಹೆಚ್ಚಾಗಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದರು.
2013ರ ಚುನಾವಣೆಯಲ್ಲಿ 7,18,000 ಹೊಸ ಯುವ ಮತದಾರರು ಮತ ಚಲಾಯಿಸುವ ಹಕ್ಕನ್ನು ಪಡೆದಿದ್ದರು. ಅದೇ ರೀತಿ ಪ್ರಸ್ತುತ 2018ರ ಚುನಾವಣೆಗಾಗಿ 15,42,000 ಹೊಸ ಯುವ ಮತದಾರರು ನೋಂದಣಿಯಾಗಿದ್ದಾರೆ. ಕಳೆದ ಚುನಾವಣೆ ಹೋಲಿಸಿಕೊಂಡಲ್ಲಿ ಶೇ.1.16 ರಿಂದ 2.20 ಏರಿಕೆ ಕಂಡಿದ್ದು, ಇದರಲ್ಲಿ ಲಿಂಗಾನುಪಾತ ಸಾವಿರ ಪುರುಷರಿಗೆ 958 ರಿಂದ 972 ಏರಿಕೆ ಕಂಡು ಬಂದಿದೆ.
ಮತಗಟ್ಟೆಗಳ ವಿವರ: ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಒಟ್ಟು 52,034 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಪ್ರಸ್ತುತ ಚುನಾವಣೆಗಾಗಿ 56,696 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಇದೇ ಸಂಖ್ಯೆಯ ಮತಗಟ್ಟೆ ಅಧಿಕಾರಿಗಳನ್ನು ಸಹ ನೇಮಿಸಲಾಗುತ್ತದೆ. ಒಟ್ಟು 1,850 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಈ ಚುನಾವಣೆಯಲ್ಲಿ ಸ್ಥಾಪಿಸಲಾಗುತ್ತಿದೆ.
ಚುನಾವಣೆಗಾಗಿ ಪೂರ್ವಸಿದ್ಧತೆ: ಪ್ರಸ್ತುತ ಚುನಾವಣೆ ರಾಜ್ಯದಲ್ಲಿ ಒಂದೇ ಹಂತದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಕ್ಕಾಗಿ 3,56,552 ಅಧಿಕಾರಿ/ಸಿಬ್ಬಂದಿಗಳ ಅವಶ್ಯಕವಿರುತ್ತದೆ. ನೀತಿ ಸಂಹಿತೆ ಉಲ್ಲಂಘನೆ ನಿಗಾವಹಿಸಲು 1361 ತಂಡಗಳನ್ನು ರಚಿಸಲಾಗುವುದು. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾವಹಿಸಲು 1,503 ತಂಡಗಳು ಹಾಗೂ 1,542 ಸಂಚಾರಿ ನಿಗಾ ತಂಡಗಳು ಮತ್ತು 2018 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
-ಸಂಚಾರಿ ನಿಗಾ ತಂಡಗಳ ವಾಹನಗಳ ಜಿಪಿಎಸ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ.
-ಮತಗಟ್ಟೆಗಳ ಜಿಐಎಸ್ ಆಧಾರಿತ ದತ್ತಾಂಶ ಹಾಗೂ ಡಿಜಿಟಲ್ ಮ್ಯಾಪ್‌ಗಳ ಲಭ್ಯತೆ.
-ಮತಗಟ್ಟೆಗಳ ಪ್ರದೇಶ ಹಾಗೂ ವಿಧಾನಸಭಾ ಕ್ಷೇತ್ರಗಳ ಡಿಜಿಟಲ್ ಅಟ್ಲಾಸ್
-ವಿಕಲಚೇತನರನ್ನು ಗುರುತಿಸಿ ಅವರಿಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ
-ಮತಗಟ್ಟೆಗಳನ್ನು ಗುರುತಿಸಲು ಎಸ್‌ಎಂಎಸ್ ಆಧಾರಿತ ಸೇವೆ.
-ಮತಗಟ್ಟೆಗಳನ್ನು ಗುರುತಿಸಲು ಆ್ಯಪ್ ಸೇವೆ.
-ಲಭ್ಯ ಸೌಲಭ್ಯವನ್ನು ಆಧರಿಸಿ 3000 ದಿಂದ 6000 ಮತಗಟ್ಟೆಗಳ ಮತದಾನ ಪ್ರಕ್ರಿಯೆಯ ವೆಬ್ಕಾಸ್ಟಿಂಗ್ ವ್ಯವಸ್ಥೆ
-ಗಂಭೀರ ಸ್ವರೂಪದ ದೂರುಗಳ ತ್ವರಿತ ಪರಿಶೀಲನೆಗೆ ಜಿಐಎಸ್ ಆಧಾರಿತ ಟ್ರಾಕಿಂಗ್ ವ್ಯವಸ್ಥೆ
-ಮುಖ್ಯವಾಹಿನಿಯಿಂದ ಹೊರಗೆ ಉಳಿದಿರುವ ಆದಿವಾಸಿ ಬುಡಕಟ್ಟು ಜನಾಂಗದವರು, ಅಲೆಮಾರಿ ಜನಾಂಗದವರ ನೋಂದಣಿಗೆ ವಿಶೇಷ ಅಭಿಯಾನ.
-ಪ್ರಾಯೋಗಿಕವಾಗಿ ಬುಡಕಟ್ಟು ಜನಾಂಗದವರ ಸಾಂಪ್ರದಾಯಿಕ ಶೈಲಿಯ ಮತಗಟ್ಟೆಗಳ ಸ್ಥಾಪನೆ.







