ರಶ್ಯದ ವಿರುದ್ಧ ಕ್ರಮ ಭಾರತಕ್ಕೆ ಸಂದೇಶವಲ್ಲ: ಅಮೆರಿಕ

ವಾಶಿಂಗ್ಟನ್, ಮಾ. 27: ಅಮೆರಿಕದಿಂದ 60 ರಶ್ಯ ರಾಜತಾಂತ್ರಿಕರ ಉಚ್ಚಾಟನೆ, ಭಾರತ ಸೇರಿದಂತೆ ಈ ಎರಡೂ ದೇಶಗಳೊಂದಿಗೆ ಸಮಾನ ಬಾಂಧವ್ಯವನ್ನು ಹೊಂದಿರುವ ದೇಶಗಳಿಗೆ ಯಾವುದೇ ಸಂದೇಶ ನೀಡುವ ಉದ್ದೇಶವನ್ನು ಹೊಂದಿಲ್ಲ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.
ಶೀತಲ ಸಮರ ಕಾಲವನ್ನು ನೆನಪಿಸುವಂಥ ನಿರ್ಧಾರವೊಂದರಲ್ಲಿ, ಅಮೆರಿಕವು ಸೋಮವಾರ 60 ರಶ್ಯ ರಾಜತಾಂತ್ರಿಕರನ್ನು ‘ಗುಪ್ತಚರ ಅಧಿಕಾರಿ’ಗಳೆಂದು ಬಣ್ಣಿಸಿ ಉಚ್ಚಾಟಿಸಿರುವುದನ್ನು ಹಾಗೂ ಸಿಯಾಟಲ್‌ನಲ್ಲಿರುವ ರಶ್ಯದ ಕಾನ್ಸುಲೇಟ್ ಕಚೇರಿಯನ್ನು ಮುಚ್ಚಲು ಆದೇಶ ನೀಡಿರುವುದನ್ನು ಸ್ಮರಿಸಬಹುದಾಗಿದೆ.
ರಶ್ಯದ ಮಾಜಿ ಬೇಹುಗಾರನೊಬ್ಬನಿಗೆ ಬ್ರಿಟನ್‌ನಲ್ಲಿ ವಿಷಪ್ರಾಶನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕ ಈ ಪ್ರತೀಕಾರಾತ್ಮಕ ಕ್ರಮ ತೆಗೆದುಕೊಂಡಿದೆ.
‘‘ಇದು ಬ್ರಿಟನ್‌ನ ಸ್ಯಾಲಿಸ್‌ಬರಿಯಲ್ಲಿ ರಶ್ಯದ ಮಾಜಿ ಬೇಹುಗಾರನ ಮೇಲೆ ನಡೆದ ದಾಳಿಗೆ ಪ್ರತಿಕ್ರಿಯೆ. ಸ್ಯಾಲಿಸ್‌ಬರಿ ಘಟನೆಯು ರಶ್ಯ ಇತ್ತೀಚಿನ ಹಲವು ಸಮಯದಲ್ಲಿ ಅಂತಾರಾಷ್ಟ್ರೀಯವಾಗಿ ತೆಗೆದುಕೊಂಡ ಸರಣಿ ಕ್ರಮಗಳಿಗೆ ಪ್ರತಿಕ್ರಿಯೆಯೂ ಹೌದು. ಅದು ನಿರಂತರವಾಗಿ ಅಸ್ಥಿರಗೊಳಿಸುವ ಹಾಗೂ ಆಕ್ರಮಣಕಾರಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ’’ ಎಂದು ಅಮೆರಿಕದ ಅಧಿಕಾರಿ ಹೇಳಿದ್ದಾರೆ.
‘‘ನಾವು ಭಾರತದಂಥ ದೇಶವೊಂದಕ್ಕೆ ಯಾವುದೇ ನಿರ್ದಿಷ್ಟ ಸಂದೇಶವನ್ನು ನೀಡಲು ಉದ್ದೇಶಿಸಿಲ್ಲ. ನಾವು ಭಾರತದೊಂದಿಗೆ ನಿಕಟ ಹಾಗೂ ಪರಿಣಾಮಕಾರಿ ಭಾಗೀದಾರಿಕೆಯನ್ನು ಹೊಂದಿದ್ದೇವೆ. ರಶ್ಯನ್ ಫೆಡರೇಶನ್‌ನ ನಾಯಕರಿಗೆ ನಾವು ಸಂದೇಶವನ್ನು ನೀಡಲು ಉದ್ದೇಶಿಸಿದ್ದೇವೆ’’ ಎಂದು ಅಧಿಕಾರಿ ತಿಳಿಸಿದರು.







