ರಶ್ಯ ರಾಜತಾಂತ್ರಿಕರ ಸರಣಿ ಉಚ್ಚಾಟನೆ
ಬ್ರಿಟನ್ನಲ್ಲಿ ಮಾಜಿ ಬೇಹುಗಾರನಿಗೆ ವಿಷಪ್ರಾಶನ ಪ್ರಕರಣ

ಡೊನಾಲ್ಡ್ ಟಸ್ಕ್
ವಾಶಿಂಗ್ಟನ್, ಮಾ. 27: ತನ್ನಲ್ಲಿರುವ ರಶ್ಯದ 60 ರಾಜತಾಂತ್ರಿಕರನ್ನು ಅಮೆರಿಕ ಉಚ್ಚಾಟಿಸಿದ ಬೆನ್ನಿಗೇ, ಕೆನಡ ಮತ್ತು ಐರೋಪ್ಯ ಒಕ್ಕೂಟದ ದೇಶಗಳೂ ತಮ್ಮಲ್ಲಿರುವ ರಶ್ಯ ರಾಜತಾಂತ್ರಿಕರನ್ನು ಉಚ್ಚಾಟಿಸಿವೆ.
ರಶ್ಯದ ಬೇಹುಗಾರನಿಗೆ ಬ್ರಿಟನ್ನಲ್ಲಿ ವಿಷಪ್ರಾಶನಗೈದ ಘಟನೆಯನ್ನು ಖಂಡಿಸಿ ಕೆನಡ ನಾಲ್ವರು ರಶ್ಯ ರಾಜತಾಂತ್ರಿಕರನ್ನು ಉಚ್ಚಾಟಿಸಿದೆ.
ಐರೋಪ್ಯ ಒಕ್ಕೂಟದ 14 ದೇಶಗಳು ರಶ್ಯದ ರಾಜತಾಂತ್ರಿಕರನ್ನು ಉಚ್ಚಾಟಿಸಿವೆ ಎಂಬುದಾಗಿ ಐರೋಪ್ಯ ಒಕ್ಕೂಟದ ಅಧ್ಯಕ್ಷ ಡೊನಾಲ್ಡ್ ಟಸ್ಕ್ ಹೇಳಿದ್ದಾರೆ.
‘‘ಮುಂಬರುವ ದಿನಗಳಲ್ಲಿ ಮತ್ತು ವಾರಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ರಶ್ಯ ರಾಜತಾಂತ್ರಿಕರನ್ನು ಉಚ್ಚಾಟಿಸುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು’’ ಎಂದು ಅವರು ಹೇಳಿದರು.
ಬ್ರಿಟನ್ ಈಗಾಗಲೇ 23 ರಶ್ಯನ್ ರಾಜತಾಂತ್ರಿಕರನ್ನು ಉಚ್ಚಾಟಿಸಿದೆ. ಇದಕ್ಕೆ ಪ್ರತೀಕಾರವಾಗಿ, ಅಷ್ಟೇ ಸಂಖ್ಯೆಯ ಬ್ರಿಟನ್ ರಾಜತಾಂತ್ರಿಕರನ್ನು ರಶ್ಯ ಉಚ್ಚಾಟಿಸಿದೆ.
ಮಾಜಿ ಸೋವಿಯತ್ ಒಕ್ಕೂಟದ ಘಟಕ ಯುಕ್ರೇನ್ 13 ರಶ್ಯ ರಾಜತಾಂತ್ರಿಕರನ್ನು ಉಚ್ಚಾಟಿಸಿದೆ.
ಒಕ್ಕೂಟದಿಂದ 29 ರಶ್ಯ ರಾಜತಾಂತ್ರಿಕರ ಉಚ್ಚಾಟನೆ
ಐರೋಪ್ಯ ಒಕ್ಕೂಟವು ಒಟ್ಟು 29 ರಶ್ಯ ರಾಜತಾಂತ್ರಿಕರನ್ನು ಉಚ್ಚಾಟಿಸಿದೆ.
ವಿವರ ಇಂತಿದೆ: ಕ್ರೊಯೇಶಿಯ 1, ಝೆಕ್ ರಿಪಬ್ಲಿಕ್ 3, ಡೆನ್ಮಾರ್ಕ್ 2, ಫ್ರಾನ್ಸ್ 4, ಫಿನ್ಲ್ಯಾಂಡ್ 1, ಜರ್ಮನಿ 4, ಇಟಲಿ 2, ಲಾತ್ವಿಯ 1, ಲಿತುವೇನಿಯ 3, ನೆದರ್ಲ್ಯಾಂಡ್ಸ್ 2, ಪೋಲ್ಯಾಂಡ್ 4, ರೊಮೇನಿಯ 1 ಮತ್ತು ಸ್ವೀಡನ್ 1.
ಪ್ರತೀಕಾರ ತೀರಿಸುವೆ: ರಶ್ಯ
ಅಮೆರಿಕ, ಕೆನಡ, ಯುಕ್ರೇನ್ ಮತ್ತು 14 ಐರೋಪ್ಯ ದೇಶಗಳು ತಮ್ಮಲ್ಲಿನ ರಶ್ಯ ರಾಜತಾಂತ್ರಿಕರನ್ನು ಉಚ್ಚಾಟಿಸಿರುವುದಕ್ಕೆ ತಾನು ಪ್ರತೀಕಾರ ತೀರಿಸುವುದಾಗಿ ರಶ್ಯ ವಿದೇಶ ಸಚಿವಾಲಯ ಸೋಮವಾರ ಪಣತೊಟ್ಟಿದೆ.
‘‘ರಶ್ಯ ರಾಜತಾಂತ್ರಿಕರನ್ನು ಉಚ್ಚಾಟಿಸಲು ಹಲವಾರು ಐರೋಪ್ಯ ಒಕ್ಕೂಟ ಮತ್ತು ನ್ಯಾಟೊ ದೇಶಗಳು ತೆಗೆದುಕೊಂಡಿರುವ ನಿರ್ಧಾರವನ್ನು ನಾವು ಪ್ರತಿಭಟಿಸುತ್ತೇವೆ’’ ಎಂದು ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ಸರಣಿ ಕ್ರಮಗಳು ‘ಪ್ರಚೋದನಕಾರಿ ಕ್ರಮ’ಗಳಾಗಿವೆ ಎಂದು ಅದು ಆರೋಪಿಸಿದೆ.
ಈ ದೇಶಗಳ ಗುಂಪು ತೆಗೆದುಕೊಂಡಿರುವ ‘ಸ್ನೇಹವಿರೋಧಿ ಕ್ರಮಕ್ಕೆ ನಾವು ಪ್ರತಿಕ್ರಿಯಿಸುತ್ತೇವೆ’ ಎಂದು ಮಾಸ್ಕೊ ಹೇಳಿದೆ.







