ಮುಂಬೈಯಲ್ಲಿ ಅಪಹೃತ 6 ವರ್ಷದ ಬಾಲಕಿ ಗುಜರಾತ್ ನಲ್ಲಿ ಶವವಾಗಿ ಪತ್ತೆ
ಹೆತ್ತವರೇ, ಎಚ್ಚರ !

ಮುಂಬೈ, ಮಾ. 27 : ಕಳೆದ ಶನಿವಾರ ಸಂಜೆ ಮುಂಬೈಯ ನಾಲಾಸೋಪಾರಾದಿಂದ ಅಪಹರಣಗೊಂಡಿದ್ದ 6 ವರ್ಷದ ಬಾಲಕಿಯೊಬ್ಬಳ ಮೃತದೇಹ ಗುಜರಾತ್ ನ ನವಸಾರಿ ರೈಲ್ವೆ ನಿಲ್ದಾಣದ ಶಾಕ್ ಚಾಲಯದಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿರುವ ಅತ್ಯಂತ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಈ ಬಾಲಕಿಯನ್ನು ಸುಮಾರು 20 ವರ್ಷದ ಮಹಿಳೆಯೊಬ್ಬಳು ಅಪಹರಿಸಿದ್ದಳು ಎಂದು ಸಂಶಯಿಸಲಾಗಿದೆ.
ನಾಲಾಸೋಪಾರಾ ಪ್ರದೇಶದ ಅಂಜಲಿ ಸರೋಜ್ ಇತರ ಮಕ್ಕಳೊಂದಿಗೆ ಶನಿವಾರ ಸಂಜೆ ಆಟವಾಡುತ್ತಿರುವಾಗ ಆಕೆಯನ್ನು ಅಪಹರಿಸಲಾಗಿತ್ತು. "ಸುಮಾರು 20 ವರ್ಷದ ಮಹಿಳೆಯೊಬ್ಬಳು ಆ ಮಕ್ಕಳೊಂದಿಗೆ ಮಾತನಾಡುತ್ತಾ ಅವರಿಗೆ ಚಾಕೊಲೇಟ್ ಕೊಡುತ್ತಿರುವುದನ್ನು ನಾವು ನೋಡಿದ್ದೇವೆ" ಎಂದು ನೆರೆಯವರು ಹೇಳಿದ್ದಾರೆ.
ಆ ಮಹಿಳೆ ಬಾಲಕಿಯನ್ನು ಚಾಕೊಲೇಟ್ ಕೊಡುವ ಆಮಿಷವೊಡ್ಡಿ ಅಪಹರಿಸಿದ ಬಳಿಕ ನಾಲಾಸೋಪಾರಾ ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿದೆ. ಸೋಮವಾರ ಬೆಳಗ್ಗೆ ಗುಜರಾತ್ ನ ನವಸಾರಿ ರೈಲ್ವೆ ನಿಲ್ದಾಣದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ನವಸಾರಿ ಇಲ್ಲಿಂದ 200 ಕಿಮೀ ದೂರದಲ್ಲಿದೆ.
ಪೊಲೀಸರು ದೂರು ದಾಖಲಿಸಲು ಹಾಗು ಕ್ರಮ ಕೈಗೊಳ್ಳಲು ತಡ ಮಾಡಿದರು ಎಂದು ಅಂಜಲಿಯ ಸಂಬಂಧಿಕರು ದೂರಿದ್ದಾರೆ. ಕೇವಲ 6 ವರ್ಷದ ಬಾಲಕಿ ಅಪಹರಣ ಆಗಿದ್ದರೂ ಪೊಲೀಸರು ಆಕೆ ವಾಪಸ್ ಬರುತ್ತಾಳೆ ಎಂದು ಸುಮ್ಮನಾದರು ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಇದು ಅತ್ಯಂತ ಆಘಾತಕಾರಿ ಘಟನೆಯಾಗಿದ್ದು ಮುಂಬೈಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳೆದ್ದಿವೆ. ಪೋಷಕರೂ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದು ಈ ಘಟನೆ ಎಚ್ಚರಿಸಿದೆ. ಆಟಿಕೆ, ಚಾಕೊಲೇಟ್ ಇತ್ಯಾದಿಗಳ ಆಮಿಷವೊಡ್ಡಿ ಮಕ್ಕಳನ್ನು ಅಪಹರಿಸುವ ದುಷ್ಟರ ಬಗ್ಗೆ ಮಕ್ಕಳಲ್ಲಿ ತಿಳಿ ಹೇಳುವುದು, ಮಕ್ಕಳು ಮನೆಯ ಹೊರಗೆ ಹೋಗುವಾಗ ಅವರ ಸುರಕ್ಷತೆ ಬಗ್ಗೆ ಜಾಗರೂಕತೆ ವಹಿಸುವುದು ಇತ್ಯಾದಿಗಳ ಬಗ್ಗೆ ಪೋಷಕರು ನಿರ್ಲಕ್ಷ್ಯ ವಹಿಸಬಾರದು ಎಂಬುದನ್ನು ಈ ಬೆಚ್ಚಿ ಬೀಳಿಸುವ ಘಟನೆ ಮತ್ತೆ ಎಚ್ಚರಿಸಿದೆ.







