ಸರಪಾಡಿ: ಅಧಿಕಾರಿಗಳಿಂದ ಗ್ರಾಪಂ ವ್ಯವಸ್ಥೆಗೆ ಅಗೌರವ: ಆರೋಪ

ಬಂಟ್ವಾಳ, ಮಾ. 27: ಸರಪಾಡಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಸರಪಾಡಿ ಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸ್ಥಳೀಯ ವಾರ್ಡ್ ಸದಸ್ಯರನ್ನು ಆಹ್ವಾನಿಸದೇ ಇಂಜಿನಿಯರಿಂಗ್ ವಿಭಾಗದ ಅಧಿ ಕಾರಿಗಳು ಗ್ರಾಪಂವ್ಯವಸ್ಥೆಗೆ ಅಗೌರವ ತೋರಿದ್ದಾರೆ ಎಂದು ಸರಪಾಡಿ ಗ್ರಾಪಂ ಆಡಳಿತ ಆರೋಪಿಸಿದೆ.
ಮಂಗಳವಾರ ಸರಪಾಡಿ ಪಂಚಾಯತ್ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪಂಚಾಯತ್ ಆಡಳಿತದ ಪರವಾಗಿ ಸದಸ್ಯ ಧನಂಜಯ ಶೆಟ್ಟಿ ಮಾತನಾಡಿ, ಸರಪಾಡಿ ಪಂಚಾಯತ್ ವ್ಯಾಪ್ತಿಯ ಪೆರ್ಲ ಬೀಯಪಾದೆ ಎಂಬಲ್ಲಿ ರಾಷ್ಟ್ರೀಯ ಕುಡಿಯುವ ನೀರಿನ ಯೋಜನೆಯಡಿ ಮಂಜೂರಾತಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯ ಗುದ್ದಲಿ ಪೂಜೆಯೂ ಕಳೆದ ಶನಿವಾರ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಶಿಲಾನ್ಯಾಸ ನೆರವೇರಿಸಿದ್ದರು. ಈ ಸಂದರ್ಭ ಸ್ಥಳೀಯ ಜಿಪಂ ಸದಸ್ಯರು ಸಹಿತ ಬೇರೆ ಕ್ಷೇತ್ರದ ಜಿಲ್ಲಾ ಪಂ ಸದಸ್ಯರು, ಗ್ರಾಪಂ ಅಧ್ಯಕ್ಷರು ಹಾಗೂ ಇತರ ರಾಜಕೀಯ ಮುಖಂಡರನ್ನು ಆಹ್ವಾನಿಸಲಾಗಿತ್ತು. ಆದರೆ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಈ ಭಾಗದ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವಾರ್ಡ್ ಸದಸ್ಯರನ್ನು ಆಹ್ವಾನಿಸದೇ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಪಂಚಾಯಿತಿ ವ್ಯವಸ್ಥೆಗೆ ಅಗೌರವ ತೋರಿದ್ದಾರೆ ಎಂದು ಅವರು ಆರೋಪಿಸಿದರು.
ಈ ಬಗ್ಗೆ ಪಂ ಅಧ್ಯಕ್ಷೆ ಲೀಲಾವತಿ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಪಂಚಾಯತನ್ನು ನಿರ್ಲಕ್ಷಿಸಿ ರಾಜಕೀಯ ಮಾಡಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದ ಅವರು, ಸರಿಯಾದ ನ್ಯಾಯ ಸಿಗದೇ ಹೋದಲ್ಲಿ ಬಂಟ್ವಾಳದಲ್ಲಿರುವ ಇಂಜಿನಿಯರಿಂಗ್ ವಿಭಾಗದ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ದಯಾನಂದ ಶೆಟ್ಟಿ ಮುನ್ನಲಾಯಿ, ಸದಸ್ಯರಾದ ತಾರಾವತಿ, ಪ್ರೇಮಾ, ಬೇಬಿ ಉಪಸ್ಥಿತರಿದ್ದರು







