ಹೊನ್ನಾವರ: ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಕಾರು ವಶ

ಹೊನ್ನಾವರ,ಮಾ.27: ಸರ್ಕಾರಿ ಅಧಿಕಾರಿಯೊಬ್ಬರ ಕಾರಿನಲ್ಲಿ 7 ಲಕ್ಷ ರೂ. ನಗದು ಹಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ತಾಲೂಕಿನಲ್ಲಿ ನಡೆದಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನವೇ ಈ ಘಟನೆ ನಡೆದಿದ್ದು, ಜಿಲ್ಲೆಯಲ್ಲಿ ಸಂಚಲನವುಂಟುಮಾಡಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕ್ರೈಂ ಪಿಎಸ್‍ಐ ಹರೀಶ್ ಎಚ್.ವಿ. ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಭಾಸ್ಕರ ದೇವಾಡಿಗ, ಉಪ ತಹಶೀಲ್ದಾರ್ ಮಾರುತಿ ನಾಯ್ಕ, ಹವಾಲ್ದಾರ ಮಾದೇವ ನಾಯ್ಕ, ಸಿಬ್ಬಂದಿ ಹಮೀದ್ ಶೇಕ್ ಇವರು ಪಟ್ಟಣದ ಸಾಗರ್ ರೆಸಿಡೆನ್ಸಿ ಬಳಿ ಪಾರ್ಕ್ ಮಾಡಿದ್ದ ಸರ್ಕಾರಿ ಕಾರು (ಕೆಎ30 ಜಿ 0499)ನ್ನು ಶೋಧಿಸಿದ ವೇಳೆ ಈ ಹಣ ಪತ್ತೆಯಾಗಿದೆ. ವಿಚಾರಣೆ ನಡೆಸಿದಾಗ ಈ ಕಾರು ಕಾರವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಗಂಗಾ ನಾಯ್ಕರಿಗೆ ಸೇರಿದ್ದಾಗಿ ತಿಳಿದು ಬಂದಿದ್ದು, ಹಣ, ಕಾರು ಹಾಗೂ ಮೊಬೈಲ್‍ಫೋನನ್ನು ಕುಮಟಾ ಉಪವಿಭಾಗಾಧಿಕಾರಿ ವಶಕ್ಕೆ ಒಪ್ಪಿಸಲಾಗಿದೆ.
ಪ್ಲೈಯಿಂಗ್ ಸ್ಕ್ವಾಡ್ ಭಾಸ್ಕರ್ ದೇವಾಡಿಗ ಹಾಗೂ ಪ್ರಭಾರಿ ತಹಶೀಲ್ದಾರ್ ಮಾರುತಿ ನಾಯ್ಕ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿ ವಶಪಡಿಸಿಕೊಂಡ 2000, 500, 100 ರೂ. ಮುಖಬೆಲೆಯ ನೋಟುಗಳ 7 ಲಕ್ಷ ರೂ.ಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲು ಇಡಲಾಗಿದೆ. ಹಣ ಸಾಗಿಸುತ್ತಿದ್ದ ಕಾರನ್ನು ಕುಮಟಾ ಉಪವಿಭಾಗಾಧಿಕಾರಿಗಳ ವಶಕ್ಕೆ ನೀಡಲಾಗಿದೆ.
ಗಂಗ ನಾಯ್ಕ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಸಾಗಿಸಲಾಗುತ್ತಿದ್ದ ಹಣ ತನಗೆ ಸಂಬಂಧಿಸಿದ್ದಲ್ಲ ಎಂದಷ್ಟೇ ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸರ್ಕಾರಿ ವಾಹನದಲ್ಲಿ ಹಣ ಸಾಗಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.







