ಕರ್ನಾಟಕ ವಿಧಾನ ಸಭೆ ಚುನಾವಣೆ : ಪ್ರತಿ ಅಭ್ಯರ್ಥಿಯ ವೆಚ್ಚದ ಮಿತಿ 28 ಲಕ್ಷ ರೂ.

ಹೊಸದಿಲ್ಲಿ, ಮಾ. 27: ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿ ಸ್ಪರ್ಧಿ 28 ಲಕ್ಷ ರೂ. ಖರ್ಚು ಮಾಡಬಹುದು ಎಂದು ಮಂಗಳವಾರ ಚುನಾವಣಾ ಆಯೋಗ ಹೇಳಿದೆ. ಆದಾಗ್ಯೂ, ರಾಜಕೀಯ ಪಕ್ಷಗಳು ವೆಚ್ಚ ಮಾಡುವುದಕ್ಕೆ ಗರಿಷ್ಠ ಮಿತಿ ಇಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
‘‘ಪರಿಷ್ಕೃತ ಮಿತಿಯಂತೆ ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿ ಗರಿಷ್ಠ 28 ಲಕ್ಷ ರೂ. ವೆಚ್ಚ ಮಾಡಬಹುದು.’’ ಎಂದು ಮುಖ್ಯ ಚುನಾವಣಾ ಆಯುಕ್ತ ರಾವತ್ ಹೇಳಿದ್ದಾರೆ.
ಫಲಿತಾಂಶ ಘೋಷಿಸುವ ದಿನಾಂಕದ 30 ದಿನಗಳ ಒಳಗೆ ವೆಚ್ಚದ ಲೆಕ್ಕಾಚಾರವನ್ನು ಎಲ್ಲ ಅಭ್ಯರ್ಥಿಗಳು ಸಲ್ಲಿಸುವಂತೆ ಚುನಾವಣಾ ಆಯೋಗ ತಿಳಿಸಿದೆ. ವಿಧಾನ ಸಬೆ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳ ಪ್ರಾಯೋಜಿತ ಅಭ್ಯರ್ಥಿಗಳು ಎಲ್ಲಾ ಚುನಾವಣಾ ಪ್ರಚಾರಗಳ ಲೆಕ್ಕಾಚಾರ ನಿರ್ವಹಿಸಬೇಕು ಹಾಗೂ ಲೆಕ್ಕಾಚಾರವನ್ನು ಚುನಾವಣೆ ಪೂರ್ಣಗೊಂಡ 75 ದಿನಗಳ ಒಳಗೆ ಆಯೋಗಕ್ಕೆ ಸಲ್ಲಿಸಬೇಕು. ಈ ಲೆಕ್ಕಾಚಾರವನ್ನು ಸಾರ್ವಜನಿಕ ವೀಕ್ಷಣೆಗಾಗಿ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಆಯೋಗ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ವೆಚ್ಚ ವೀಕ್ಷಕರು ಹಾಗೂ ವೆಚ್ಚ ಉಪ ವೀಕ್ಷಕರನ್ನು ನಿಯೋಜಿಸಲಿದೆ. ಚುನಾವಣಾ ಪ್ರಕ್ರಿಯೆ ಸಂದರ್ಭ ನಿಯಂತ್ರಣ ಕೊಠಡಿ ಹಾಗೂ ಮೇಲ್ವಿಚಾರಣಾ ಕೇಂದ್ರಗಳ ಟೋಲ್ ಫ್ರೀ ದೂರವಾಣಿ ಸಂಖ್ಯೆಗಳು 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ ಎಂದು ರಾವತ್ ತಿಳಿಸಿದ್ದಾರೆ.





