ಮಣಿಪಾಲ ಪೊಲೀಸರಿಂದ ಯುವಕನಿಗೆ ದೌರ್ಜನ್ಯ ಆರೋಪ: ತಾಯಿಯಿಂದ ಡಿಸಿಗೆ ದೂರು

ಮಣಿಪಾಲ, ಮಾ.27: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಠಾಣೆಗೆ ಕರೆಸಿದ ಮಣಿಪಾಲ ಪೊಲೀಸರು ನನ್ನ ಮಗ ರಾಕೇಶ್ ಪೂಜಾರಿ (23) ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವುದಾಗಿ ಉದ್ಯಾವರ ಬೊಳ್ಜೆಯ ನಳಿನಿ ಶೇಖರ್ ಉಡುಪಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮಾ. 25ರಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಮಣಿಪಾಲ ಕಾರ್ನರ್ ಬಳಿ ನಡೆದ ಜಗಳಕ್ಕೆ ಸಂಬಂಧಿಸಿ ನೀಡಿದ ದೂರಿಗೆ ರಾಜಿ ಮಾಡಲು ಠಾಣೆಗೆ ಕರೆಸಿದ ಪೊಲೀಸರು, ಅಲ್ಲಿ ರಾಕೇಶ್ ಪೂಜಾರಿಯಿಂದ ಮುಚ್ಚಳಿಕೆ ಬರೆಸಿಕೊಂಡು ಪ್ರಕರಣ ಮುಕ್ತಾಯ ಮಾಡಿದ್ದರು. ನಂತರ ಮಣಿಪಾಲ ಠಾಣೆಯ ಪೇದೆಗಳಾದ ವಿಶ್ವಜಿತ್, ನವೀನ್ ಮತ್ತಿತ್ತರರು ಸೇರಿ ಅಮಾನುಷವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಕೈಕಾಲುಗಳನ್ನು ಮುರಿದಿದ್ದಾರೆ ಎಂದು ನಳಿನಿ ಶೇಖರ್ ಆರೋಪಿಸಿದ್ದಾರೆ.
ಪೊಲೀಸರ ಅವಾಚ್ಯ ಶಬ್ದಗಳ ಬೈಗುಳದಿಂದ ಮಗ ಮಾನಸಿಕವಾಗಿ ನೊಂದಿದ್ದಾನೆ. ಮುಕ್ತಾಯಗೊಳಿಸಿದ ಪ್ರಕರಣವನ್ನು ಮತ್ತೆ ದಾಖಲಿಸುವುದಾಗಿ ಪೊಲೀಸರು ಬೆದರಿಕೆ ಹಾಕಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಮಗನ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನು ಕೂಡಲೇ ಕರ್ತವ್ಯದಿಂದ ಅಮಾ ನತುಗೊಳಿಸಬೇಕೆಂದು ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಆತ್ಮಹತ್ಯೆ ಯತ್ನ: ‘ಪಾರ್ಕಿಂಗ್ ಗಲಾಟೆಗೆ ಸಂಬಂಧಿಸಿ ಇಂದು ಠಾಣೆಗೆ ಕರೆಸಿದ ಮಣಿಪಾಲ ಪೊಲೀಸರು ನನಗೆ ಹೊಡೆದು ಎರಡು ಲಾಠಿ ಪುಡಿ ಮಾಡಿದರು. ಇದರಿಂದ ನನ್ನ ಕೈ ಫ್ಯಾಕ್ಚರ್ ಆಗಿದೆ. ವಿಶ್ವಜಿತ್ ಎಂಬವರು ನನ್ನ ತಾಯಿಗೆ ಕೆಟ್ಟದಾಗಿ ಅವಾಚ್ಯ ಶಬ್ದಗಳಿಂದ ಬೈದರು. ಅದು ನನಗೆ ಕೇಳಲು ಆಗಿಲ್ಲ. ಅದಕ್ಕಾಗಿ ನಾನು ಬ್ಲೇಡ್‌ನಿಂದ ಗೀರಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿರುವ ರಾಕೇಶ್ ಪೂಜಾರಿ ತಿಳಿಸಿದ್ದು, ಈ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಕೇಶ್ ಪೂಜಾರಿ ಕೈಯಿಂದ ಹೊಡೆದು ಹಲ್ಲೆ ನಡೆಸಿ, ಕಲ್ಲಿನಿಂದ ಹೊಡೆಯಲು ಬಂದಿರುವುದಾಗಿ ಮಣಿಪಾಲ ಎಂಐಟಿ ಪ್ರಾಧ್ಯಾಪಕ ಚಂದ್ರಕಾಂತ (36) ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿ ಸಿಸಿ ಕ್ಯಾಮೆರಾದ ಆಧಾರದಲ್ಲಿ ಆರೋಪಿ ರಾಕೇಶ್ ಪೂಜಾರಿಯನ್ನು ಮತ್ತೆ ಠಾಣೆಗೆ ಕರೆಸಿ ಮುಚ್ಚಳಿಕೆಯನ್ನು ಪಡೆದು ಕಳುಹಿಸಿಕೊಡಲಾಗಿತ್ತು. ಠಾಣೆಯಿಂದ ಹೋದ ನಂತರ ಆತ ನನಗೆ ಅವಮಾನ ಆಗಿದೆ, ವಿನಾಕಾರಣ ಪೊಲೀಸರು ಠಾಣೆಗೆ ಕರೆಸಿ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿ ತನ್ನ ಎರಡು ಕೈಗಳನ್ನು ಬ್ಲೇಡಿನಿಂದ ಗೀರಿಕೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಪರಿಶೀಲಿಸಿ ಕ್ರಮ: ಎಸ್ಪಿ
ಪೊಲೀಸ್ ದೌರ್ಜನ್ಯದ ದೂರಿಗೆ ಸಂಬಂಧಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರಗಿಸಲಾಗುವುದು. ಈ ಸಂಬಂಧ ವಸ್ತುಸ್ಥಿತಿ ತಿಳಿದುಕೊಳ್ಳಲು ಉಡುಪಿ ಡಿವೈಎಸ್ಪಿ ಟಿ.ಆರ್.ಜೈಶಂಕರ್ ಅವರಿಗೆ ಸೂಚಿಸಿದ್ದು, ಅವರು ಆಸ್ಪತ್ರೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.







