ಎ. 3 ರಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ: ಸಚಿವ ಡಿ.ಕೆ.ಶಿವಕುಮಾರ್

ಶಿವಮೊಗ್ಗ, ಮಾ. 27: 'ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಎ. 3 ರಂದು ಶಿವಮೊಗ್ಗ ನಗರಕ್ಕೆ ಆಗಮಿಸಲಿದ್ದಾರೆ. ಪಕ್ಷದ ಪರವಾಗಿ ಮತಯಾಚನೆ ಮಾಡಲಿದ್ದಾರೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ನಗರದ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಏಪ್ರಿಲ್ 3 ರಿಂದ 4 ಹಾಗೂ 7 ರಿಂದ 8 ರವರೆಗೆ ರಾಜ್ಯ ಪ್ರವಾಸ ನಡೆಸಲಿದ್ದಾರೆ. ಈ ವೇಳೆ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಜಿಲ್ಲೆಗಳಲ್ಲಿ ರಾಹುಲ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗ ನಗರಕ್ಕೆ ರಾಹುಲ್ ಗಾಂಧಿ ಭೇಟಿಯ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ದತೆಗಳ ಪರಿಶೀಲನೆಗಾಗಿ ತಾನು ನಗರಕ್ಕೆ ಆಗಮಿಸಿದ್ದೇನೆ. ಹಾಗೆಯೇ ಪಕ್ಷದ ಮುಖಂಡರೊಂದಿಗೂ ಸಮಾಲೋಚನೆ ನಡೆಸಲಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
ವಾಗ್ದಾಳಿ: 'ಸಿಎಂ ಸಿದ್ದರಾಮಯ್ಯ ಕೆಟ್ಟು ಹೋದ ಹಳೇಯ ಟ್ರಾನ್ಸ್ ಫಾರ್ಮರ್ ಇದ್ದಂತೆ' ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, 'ಜನರು ಹಳೇ ಟ್ರಾನ್ಸ್ ಫಾರ್ಮಾರ್ ಗೆ ಅವಕಾಶ ನೀಡಿದ್ದರು. ಆ ಟ್ರಾನ್ಸ್ ಫಾರ್ಮರ್ ಹೇಗೆ ಕೆಲಸ ಮಾಡಿದೆ ಎಂಬುದನ್ನ ಜನ ನೋಡಿದ್ದಾರೆ. ಇದೇ ಟ್ರಾನ್ಸ್ ಫಾರ್ಮರ್ ನಿಂದಲೇ ರಾಜ್ಯದ ಜನತೆ ಕಳೆದ 5 ವರ್ಷಗಳಿಂದ ನಿರಂತರವಾಗಿ ವಿದ್ಯುತ್ ಪಡೆಯುತ್ತಿದ್ದಾರೆ' ಎಂದು ಸೂಚ್ಯವಾಗಿ ಹೇಳಿದರು.
ಪಕ್ಷದ ಎಲ್ಲ ನಾಯಕರು ಸೇರಿ ಒಮ್ಮತದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‍ಗೆ ಕಳುಹಿಸಲಿದ್ದು, ವರಿಷ್ಠರು ಅಭ್ಯರ್ಥಿಗಳ ಆಯ್ಕೆ ನಡೆಸಲಿದ್ದಾರೆ. ಘೋಷಿತ ಅಭ್ಯರ್ಥಿ ಗೆಲುವಿಗೆ ನಾಯಕರೆಲ್ಲರೂ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.







