ಮಣಿಪಾಲ: ಮಾಹೆಯ ಸಿಲ್ವರ್ ಉತ್ಸವ್‌ದಲ್ಲಿ ‘ಮಾಸ್ಟರ್ ಚೆಫ್’

ಮಣಿಪಾಲ, ಮಾ.27: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ತನ್ನ ಸಿಲ್ವರ್ ಉತ್ಸವ್-2018ರ ಅಂಗವಾಗಿ ಶನಿವಾರ ತನ್ನದೇ ಆದ ‘ಮಾಸ್ಟರ್ ಚೆಫ್’ ಸ್ಪರ್ಧೆಯನ್ನು ಹಮ್ಮಿಕೊಳ್ಳಲಿದೆ.
ಮಣಿಪಾಲದ ವೆಲ್‌ಕಮ್ ಗ್ರೂಪ್ ಗ್ರಾಜ್ಯುವೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಷನ್‌ನ ನೂತನ ಕಟ್ಟಡದ ಅತ್ಯಾಧುನಿಕ ಅಡುಗೆಕೋಣೆ (ಕಿಚನ್) ಯಲ್ಲಿ ಸ್ಪರ್ದಾಳುಗಳು ಹೊಸ ಹೊಸ ಬಗೆಯ ಸಸ್ಯಾಹಾರಿ, ಮಾಂಸಾಹಾರಿ ಹಾಗೂ ಇತರ ಪಾಕ ವೈವಿಧ್ಯತೆಯನ್ನು ತಯಾರಿಸಿ ಪ್ರದರ್ಶಿಸಲಿದ್ದಾರೆ.
ಉತ್ಸವ್-2018, ಮಾಹೆಯ ಸಿಬ್ಬಂದಿಗಳಿಗೆ ನಡೆಸುವ ಈ ಅಡುಗೆ ಸ್ಪರ್ಧೆ ಯೊಂದಿಗೆ ಉದ್ಘಾಟನೆಗೊಳ್ಳಲಿದೆ. ಬಳಿಕ ಹೂಜೋಡಣೆ ಸ್ಪರ್ಧೆ ಹಾಗೂ ವೈವಿದ್ಯಮಯ ಮನರಂಜನಾ ಸ್ಪರ್ಧೆಗಳು ನಡೆಯಲಿವೆ. ಇದು ಎ.2ರಂದು ನಡೆಯಲಿದೆ. ಮಾಹೆಯ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳು ಎ.3ರಂದು ಪ್ರಾರಂಭಗೊಳ್ಳಲಿವೆ ಎಂದು ಮಾಹೆಯ ಸಾಂಸ್ಕೃತಿಕ ಸಮನ್ವಯ ಸಮಿತಿಯ ಅಧ್ಯಕ್ಷೆ ಡಾ.ಶೋಭಾ ಯು.ಕಾಮತ್ ತಿಳಿಸಿದ್ದಾರೆ.
ಮಾಹೆಗೆ 25 ವರ್ಷಗಳು ಪೂರ್ಣಗೊಂಡ ಪ್ರಯುಕ್ತ ಸಿಲ್ವರ್ ಉತ್ಸವ್- 2018 ನಡೆಯುತ್ತಿದೆ. ಇದರಲ್ಲಿ ಕೇವಲ ಮಣಿಪಾಲದ ಮಾತ್ರವಲ್ಲದೇ ಮಾಹೆಗೆ ಸೇರಿದ ಮಂಗಳೂರು, ಬೆಂಗಳೂರು, ಸಿಕ್ಕಿಂ, ದುಬಾಯಿ ಹಾಗೂ ಜೈಪುರ ಕ್ಯಾಂಪಸ್‌ಗಳ ವಿದ್ಯಾರ್ಥಿಗಳೂ ಪಾಲ್ಗೊಳ್ಳಲಿದ್ದಾರೆ. ಇದು ನಾಲ್ಕು ದಿನಗಳ ಉತ್ಸವವಾಗಿರುತ್ತದೆ. ವಸಂತಿ ಆರ್. ಪೈ ಅವರು ಈ ಉತ್ಸವ್‌ವನ್ನು ಉದ್ಘಾಟಿಸಲಿದ್ದಾರೆ ಎಂದರು.
ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ, ಕಾರ್ಟೂನಿಂಗ್, ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆ, ಸಂಗೀತ ಸ್ಪರ್ಧೆ ಹಾಗೂ ಜಾನಪದ ನೃತ್ಯ ಸ್ಪರ್ಧೆಗಳೂ ನಡೆಯಲಿವೆ. ಆವೆಮಣ್ಣಿನ ಶಿಲ್ಪ, ಮೈಮ್, ಬೀದಿ ನಾಟಕ, ಜಾಹೀರಾತು ಹಾಗೂ ಫ್ಯಾಶನ್ ಶೋಗಳೊಂದಿಗೆ ಎ.6ರಂದು ಇದು ಮುಕ್ತಾಯಗೊಳ್ಳಲಿದೆ ಎಂದು ಡಾ.ಶೋಭಾ ಕಾಮತ್ ತಿಳಿಸಿದರು.







