ರಿಪಬ್ಲಿಕನ್ ಮತಗಳನ್ನು ಗುರುತಿಸಲು ‘ರಿಪನ್’

ಲಂಡನ್, ಮಾ. 27: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುನ್ನ ರಿಪಬ್ಲಿಕನ್ ಮತದಾರರನ್ನು ಗುರುತಿಸಲು ಕೆನಡದ ಕಂಪೆನಿ ‘ಅಗ್ರಿಗೇಟ್‌ಐಕ್ಯೂ’ ‘ರಿಪನ್’ ಎಂಬ ಸಾಫ್ಟ್‌ವೇರನ್ನು ಅಭಿವೃದ್ಧಿಪಡಿಸಿತ್ತು ಎಂದು ಕೇಂಬ್ರಿಜ್ ಅನಲಿಟಿಕಾ ಹಗರಣವನ್ನು ಬಹಿರಂಗಪಡಿಸಿರುವ ಕ್ರಿಸ್ಟೋಫರ್ ವೈಲೀ ಮಂಗಳವಾರ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗುವುದನ್ನು ಖಚಿತಪಡಿಸಲು ಫೇಸ್‌ಬುಕ್‌ನಿಂದ ಪಡೆದ ಬಳಕೆದಾರರ ಮಾಹಿತಿಗಳನ್ನು ಕೇಂಬ್ರಿಜ್ ಅನಲಿಟಿಕಾ ಹೇಗೆ ಬಳಸಿತು ಎಂಬುದನ್ನು ಬ್ರಿಟನ್‌ನ ರಾಜಕೀಯ ಸಲಹಾ ಸಂಸ್ಥೆ ಕೇಂಬ್ರಿಜ್ ಅನಲಿಟಿಕಾದ ಮಾಜಿ ಉದ್ಯೋಗಿ ವೈಲೀ ಈಗಾಗಲೇ ಬಹಿರಂಗಪಡಿಸಿರುವುದನ್ನು ಸ್ಮರಿಸಬಹುದಾಗಿದೆ.
ರಿಪಬ್ಲಿಕನ್ ಪಕ್ಷವನ್ನು 1854ರಲ್ಲಿ ರಿಪನ್ ಎಂಬ ಪಟ್ಟಣದಲ್ಲಿ ಸ್ಥಾಪಿಸಲಾಗಿತ್ತು. ಅದೇ ಹೆಸರನ್ನು ಈ ಸಾಫ್ಟ್‌ವೇರ್‌ಗೆ ನೀಡಲಾಗಿದೆ. ಮತದಾರರ ಮಾಹಿತಿಕೋಶವನ್ನು ನಿಭಾಯಿಸಲು, ನಿರ್ದಿಷ್ಟ ಮತದಾರರನ್ನು ಗುರಿಯಾಗಿಸಲು, ಪ್ರಚಾರ ಮಾಡಲು, ಧನ ಸಂಗ್ರಹ ಮಾಡಲು ಹಾಗೂ ಸಮೀಕ್ಷೆಗಳನ್ನು ನಡೆಸಲು ಈ ಸಾಫ್ಟ್‌ವೇರ್ ಪ್ರಚಾರ ತಂಡಕ್ಕೆ ಅವಕಾಶ ನೀಡುತ್ತದೆ.





