ಗಾಂಜಾ ವ್ಯಸನಿಗಳ ವಿರುದ್ಧ ದೂರು: ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಕಮಿಷನರ್‌ಗೆ ಮನವಿ
ಮಂಗಳೂರು, ಮಾ.27: ಗಾಂಜಾ ವ್ಯಸನಿಗಳು ಹಾಗೂ ಜೂಜುನಿರತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹಣ್ಣು ಹಂಪಲು ವ್ಯಾಪಾರಿ ಹಾಗೂ ತಳ್ಳುಗಾಡಿಯ ಮಾಲಕ ಬಿ.ಕೆ.ಇಸ್ಮಾಯೀಲ್ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
70 ಹರೆಯದ ನಾನು ಕಳೆದ ಕೆಲವು ವರ್ಷಗಳಿಂದ ಬಂದರ್‌ನ ನಾತ್ ವಾರ್ಫ್‌ನಲ್ಲಿ ಪೋರ್ಟ್ ಗೇಟ್‌ನ ಬಳಿಯಲ್ಲಿ ತಳ್ಳುಗಾಡಿಯಲ್ಲಿ ಹಣ್ಣು ಹಂಪಲುಗಳನ್ನಿಟ್ಟು ಮಾರಾಟ ಮಾಡುತ್ತಿದ್ದೇನೆ. ಪೋರ್ಟ್ ಆವರಣದಲ್ಲಿ ಕೆಲವು ಗ್ರಾಹಕರು ತನ್ನಲ್ಲಿ ಹಣ್ಣು ಹಂಪಲನ್ನು ಖರೀಸುತ್ತಾರೆ. ಇದರಿಂದಲೇ ನನ್ನ ಕುಟುಂಬದ ಜೀವನ ಹೋಗಬೇಕು. ಆದರೆ, ಕಳೆದ ಜ.10ರಂದು ಬೆಳಗ್ಗೆ 11 ಗಂಟೆಗೆ ಉತ್ತರ ಪೊಲೀಸ್ ಠಾಣಾ ಉಪ ನಿರೀಕ್ಷಕ ಪ್ರದೀಪ್ ಟಿ.ಆರ್. ಮತ್ತಿತರರು ತನ್ನ ತಳ್ಳುಗಾಡಿಯಲ್ಲಿದ್ದ ಹಣ್ಣುಗಳನ್ನು ಎಸೆದು, ಗಾಡಿಯನ್ನೂ ರಸ್ತೆಗುರುಳಿಸಿ ನಷ್ಟವನ್ನುಂಟು ಮಾಡಿದ್ದಾರೆ. ಅಲ್ಲದೆ ನನ್ನ ತಳ್ಳು ಗಾಡಿಯು ಪೋರ್ಟ್ ಆವರಣದಲ್ಲಿಟ್ಟಿದ್ದಾರೆ ಎಂದು ಇಸ್ಮಾಯೀಲ್ ಆರೋಪಿಸಿದ್ದಾರೆ.
ಪೋರ್ಟ್ ಆವರಣದಲ್ಲಿ ಡ್ರಗ್ಸ್‌ಗಳನ್ನು ಮಾರಾಟ ಮಾಡುತ್ತಿರುವ ನಾರ್ತ್ ವಾರ್ಫ್ ನಿವಾಸಿಗಳಾದ ಜಮಾಲ್, ಗೌಸ್, ಕೆ.ಪಿ. ಅಬ್ದುರ್ರಹ್ಮಾನ್ ಅವರ ಅಕ್ರಮ ದಂಧೆಗೆ ತಾನೂ ಅಡ್ಡಿಯಾಗಿರುವುದೇ ಅಧಿಕಾರಿಗಳು ನನ್ನ ತಳ್ಳುಗಾಡಿ ವಶಕ್ಕೆ ಪಡೆಯಲು ಕಾರಣವಾಗಿದೆ. ನಾನು ಪೋರ್ಟ್ ಆವರಣದ ಎದುರು ಹಣ್ಣು ಹಂಪಲುಗಳನ್ನು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಇವರು ಪೋರ್ಟ್ ಆವರಣದೊಳಗೆ ಜೂಜು ನಿರತರಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಇವರ ಅಕ್ರಮ ದಂಧೆಗೆ ನಾನು ಅಡ್ಡಿಯಾಗುತ್ತಿದ್ದೇನೆಂದು ಈ ಮೂವರು ಆರೋಪಿಗಳು ಎಸ್‌ಐ ಅವರೊಂದಿಗೆ ಕೈ ಜೋಡಿಸಿ ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಈ ನಾಲ್ವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಅವರು ಹಿರಿಯ ಅಧಿಕಾರಿಗಳಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಹಿರಿಯ ಅಧಿಕಾರಿಗೇ ನೀಡಿದ್ದ ದೂರಿನಂತೆ ಅರ್ಜಿಯ ತನಿಖೆ ನಡೆಸುವಂತೆ ಮೇಲಧಿಕಾರಿಯವರು ಉತ್ತರ ಪೊಲೀಸ್ ಠಾಣೆಗೆ ಸೂಚಿಸಿದ್ದು, ಅದರಂತೆ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಠಾಣಾ ನಿರೀಕ್ಷಕರು ಇಸ್ಮಾಯೀಲ್ ಅವರಿಗೆ ನೀಡಿರು ಹಿಂಬರದಲ್ಲಿ ತಿಳಿಸಿದ್ದಾರೆ. ಅಲ್ಲದೆ, ಉತ್ತರ ಧಕ್ಕೆಯಲ್ಲಿ ತಾವು ಅಕ್ರಮ ಗೂಡಂಗಡಿಯನ್ನಿಟ್ಟುಕೊಂಡು ಇತರರಿಗೆ ತೊಂದರೆಯನ್ನುಂಟು ಮಾಡುತ್ತಿರುವ ಬಗ್ಗೆ ಸಿ. ಅಹ್ಮದ್ ಜಮಾಲ್ ಅವರು ಈ ಹಿಂದೆ ದೂರು ನೀಡಿದ್ದು, ಈ ದೂರಿನಂತೆ ಎಸ್‌ಐ ಪ್ರದೀಪ್‌ಅವರು ತನಿಖೆ ನಡೆಸಿ ಗಾಡಿಯನ್ನು ಕಾನೂನು ಪ್ರಕಾರ ಬಂದರು ಅಧಿಕಾರಿಯವರು ತೆರವುಗೊಳಿಸಿದ್ದಾರೆ. ಕೈಗಾಡಿಯು ಬಂದರು ಅಧಿಕಾರಿಯವರ ಕಚೇರಿ ಆವರಣದಲ್ಲಿದ್ದು, ಗಾಡಿಯನ್ನು ಪಡೆಯಲು ಬಂದರು ಕಚೇರಿಯನ್ನು ಸಂಪರ್ಕಿಸುವಂತೆ ಉತ್ತರ ಪೊಲೀಸ್ ಠಾಣಾ ನಿರೀಕ್ಷಕರು ಇಸ್ಮಾಯೀಲ್ ಅವರಿಗೆ ನೀಡಿರುವ ಹಿಂಬರದಲ್ಲಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.







