ಕೊಂಡಾಣ ರಸ್ತೆ ಕಾಂಕ್ರಿಟೀಕರಣ ವಿಳಂಬ ನೀತಿ ವಿರುದ್ಧ ಪ್ರತಿಭಟನೆ
ಕೊಣಾಜೆ, ಮಾ. 27: ಮಾಡೂರು-ಕೊಂಡಾಣ ಪಿಲಿಚಾಮುಂಡಿ ಬಂಟ ದೈವಸ್ಥಾನದ ಸಂಪರ್ಕ ರಸ್ತೆಯ ಕಾಂಕ್ರಿಟೀಕರಣಕ್ಕೆ ಕೊಟೆಕಾರು ಪಟ್ಟಣ ಪಂಚಾಯತ್‌ನ ನಗರೋತ್ಥಾನ ಯೋಜನೆಯಡಿ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಶಾಸಕ ಖಾದರ್ ಅವರು ಕಾಂಕ್ರಿಟೀಕರಣ ಕಾಮಗಾರಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಂಡಾಣ ದೈವಸ್ಥಾನದ ರಸ್ತೆಯ ಕಾಂಕ್ರಿಟೀಕರಣ ವಿಳಂಬ ನೀತಿಯನ್ನು ವಿರೋಧಿಸಿ ಕೊಂಡಾಣ ರಸ್ತೆ ಹೋರಾಟ ಸಮಿತಿಯ ವತಿಯಿಂದ ಮಂಗಳವಾರ ಬೀರಿ ಜಂಕ್ಷನ್‌ನಲ್ಲಿ ನಡೆದ ರಸ್ತೆ ತಡೆ ಮತ್ತು ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಪುರಾಣ ಪ್ರಸಿದ್ಧ ಕಾರಣೀಕ ಕ್ಷೇತ್ರವಾದ ಕೊಂಡಾಣ ದೈವಸ್ಥಾನ ಸಂಪರ್ಕ ರಸ್ತೆಯ ಕಾಂಕ್ರಿಟೀಕರಣ ವಿಚಾರದಲ್ಲಿ ಶಾಸಕ ಯು.ಟಿ.ಖಾದರ್ ಅವರು ರಾಜಕೀಯ ತಾರತಮ್ಯ ಎಸಗಿದ್ದು ಖಂಡನೀಯ ಎಂದರು.
ಕಾಂಕ್ರಿಟೀಕರಣಕ್ಕಾಗಿ ರಸ್ತೆಯನ್ನೆಲ್ಲಾ ಅಗೆದು ಹಾಕಿದ್ದು ನಡೆದಾಡಲೂ ಯೋಗ್ಯವಲ್ಲದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಮೇ 22, 23ರಂದು ಕೊಂಡಾಣದ ಜಾತ್ರಾ ಮಹೋತ್ಸವವು ನಡೆಯಲಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಬರುವಂತಹ ಭಕ್ತರು ಈ ರಸ್ತೆಯಿಂದ ಸಂಚರಿಸುವುದು ಹೇಗೆನ್ನುವುದೇ ಚಿಂತೆಯಾಗಿದೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪೂರ್ಣಕಲಾ ಅವರಲ್ಲಿ ಶೀಘ್ರ ರಸ್ತೆ ಕಾಮಗಾರಿ ಆರಂಭಿಸದಿದ್ದಲ್ಲಿ ಸಚಿವ ಖಾದರ್ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಕಾರರು ಎಚ್ಚರಿಸಿದರು.
ಬಿಜೆಪಿ ಮುಖಂಡರಾದ ಮೋಹನ್ ರಾಜ್, ದಯಾನಂದ ತೊಕ್ಕೊಟ್ಟು, ಪಟ್ಟಣ ಪಂ.ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಅನಿಲ್ ಬಗಂಬಿಲ, ಸದಸ್ಯರಾದ ಜಯಶ್ರೀ ಪ್ರಪುಲ್ಲದಾಸ್, ದಿವ್ಯಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







