ಚಿಕ್ಕಮಗಳೂರು: ಹೊಳೆಕುಡಿಗೆ ಆದಿವಾಸಿಗಳ ಸಮಸ್ಯೆ ಬಗ್ಗೆ ಸ್ಥಳ ಪರಿಶೀಲಿಸಿ ಕ್ರಮ; ಜಿಲ್ಲಾಧಿಕಾರಿ
ಚಿಕ್ಕಮಗಳೂರು, ಮಾ.27: ಮೂಡಿಗೆರೆ ತಾಲೂಕಿನ ಅಮ್ತಿ ಹೊಳೆಕುಡಿಗೆ ಆದಿವಾಸಿ ಜನಾಂಗ ವಾಸಿಸುವ ಗ್ರಾಮಕ್ಕೆ ರಸ್ತೆ, ಸೇತುವೆ ಸಂಪರ್ಕದ ಸಮಸ್ಯೆ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಸೇತುವೆ ಸೌಕರ್ಯವಿಲ್ಲ ಎಂಬ ವಿಚಾರ ತಮ್ಮ ಗಮನಕ್ಕೆ ಬಂದಿದೆ. ಈ ಹಿಂದೆಯೂ ಸ್ಥಳ ಭೇಟಿ ನೀಡಿ ಬಂದಿದ್ದೇನೆ. ಈ ಕುರಿತು ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿದ್ದೇನೆ. ಪರಿಶೀಲನಾ ವರದಿ ಬಂದ ಬಳಿಕ ನದಿ ಪಕ್ಕದಲ್ಲಿಯೇ ಮುಂದಿನ ಯೋಜನೆಯಲ್ಲಿ ಸೇತುವೆ, ರಸ್ತೆ ನಿರ್ಮಾಣ ಮಾಡಿಕೊಡಲು ಅಗತ್ಯ ಕ್ರಮ ವಹಿಸುತ್ತೇನೆಂದ ಅವರು, ಈ ಹಿಂದೆ ಇದ್ದ ರಸ್ತೆಯನ್ನು ಕಾಫಿತೋಟದ ಮಾಲಕರು ಬೇಲಿ ಹಾಕಿಕೊಂಡು ಅತಿಕ್ರಮಿಸಿದ್ದಾರೆಂಬ ದೂರು ಬಂದಿದೆ. ಈ ರಸ್ತೆಯೂ ನಕಾಶೆ ಕಂಡ ರಸ್ತೆ ಎಂದು ನಿವಾಸಿಗಳು ಹೇಳುತ್ತಾರೆ. ಅದು ನಕಾಶೆ ಕಂಡ ರಸ್ತೆಯಲ್ಲ. ನಾನು ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ್ದೇನೆ. ನಕಾಶೆ ಕಂಡ ರಸ್ತೆ ಎಂಬ ದಾಖಲೆ ಇದ್ದರೆ ನನಗೆ ನೀಡಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.





