ಆಸ್ಟ್ರೇಲಿಯದ ಟೆಸ್ಟ್ ನಾಯಕತ್ವದಿಂದ ಸ್ಮಿತ್ ಉಚ್ಚಾಟನೆ
ವಾರ್ನರ್, ಬ್ಯಾಂಕ್ರಾಫ್ಟ್ ಆಸ್ಟ್ರೇಲಿಯಕ್ಕೆ ವಾಪಸ್

ಕೇಪ್‌ಟೌನ್, ಮಾ.27: ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಸ್ಟೀವ್ ಸ್ಮಿತ್‌ರನ್ನು ಆಸ್ಟ್ರೇಲಿಯದ ಟೆಸ್ಟ್ ನಾಯಕತ್ವದಿಂದ ಉಚ್ಚಾಟಿಸಲಾಗಿದೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಟಿಮ್ ಪೈನ್ ಟೆಸ್ಟ್ ನಾಯಕನಾಗಿ ಆಯ್ಕೆಯಾಗಿದ್ದಾರೆ.
‘‘ಪ್ರಕರಣದಲ್ಲಿ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಭಾಗಿಯಾಗಿದ್ದಾರೆ. ಈ ಮೂವರು ದಕ್ಷಿಣ ಆಫ್ರಿಕದಿಂದ ಆಸ್ಟ್ರೇಲಿಯಕ್ಕೆ ವಾಪಸಾಗಲಿದ್ದಾರೆ. ಈ ಮೂವರ ವಿರುದ್ಧ ಮುಂದಿನ 24 ಗಂಟೆಯೊಳಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಡರೆನ್ ಲೆಹ್ಮನ್ ಕೋಚ್ ಆಗಿ ತಂಡದಲ್ಲಿ ಮುಂದುವರಿಯಲಿದ್ದಾರೆ’’ಎಂದು ಕ್ರಿಕೆಟ್ ಆಸ್ಟ್ರೇಲಿಯದ ಸಿಇಒ ಜೇಮ್ಸ್ ಸದರ್ಲೆಂಡ್ ಹೇಳಿದ್ದಾರೆ.
ಕಳೆದ ವಾರ ಕೇಪ್‌ಟೌನ್‌ನಲ್ಲಿ ನಡೆದ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ನಡೆಸಿದ ತನಿಖೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯ ಮಂಡಳಿಯು ಪ್ರಾಥಮಿಕ ಮಾಹಿತಿ ಕಲೆ ಹಾಕಿದೆ. ಸ್ಮಿತ್, ವಾರ್ನರ್ ಹಾಗೂ ಬ್ಯಾಂಕ್ರಾಫ್ಟ್ ಕ್ರಿಕೆಟ್ ಆಸ್ಟ್ರೇಲಿಯ ನೀತಿ ಸಂಹಿತೆ ಆರ್ಟಿಕಲ್ 2.3.5ನ್ನು ಉಲ್ಲಂಘಿಸಿರುವುದಾಗಿ ಸದರ್ಲೆಂಡ್ ತಿಳಿಸಿದ್ದಾರೆ. ಸ್ಮಿತ್, ವಾರ್ನರ್ ಹಾಗೂ ಬ್ಯಾಂಕ್ರಾಫ್ಟ್ ಸ್ಥಾನಕ್ಕೆ ರೆನ್‌ಶಾ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಜೋ ಬರ್ನ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.