ಪಾವಗಡ ಮಾದರಿಯಲ್ಲೆ 3 ಕಡೆ ‘ಸೋಲಾರ್ ಪಾರ್ಕ್’: ಸಚಿವ ಡಿ.ಕೆ ಶಿವಕುಮಾರ್

ಬೆಂಗಳೂರು, ಮಾ. 28: ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಮಾದರಿಯಲ್ಲೆ ರಾಜ್ಯದಲ್ಲಿ 4 ಸಾವಿರ ಮೆ.ವ್ಯಾ.ವಿದ್ಯುತ್ ಉತ್ಪಾದನೆಗೆ 20 ಸಾವಿರ ಕೋಟಿ ರೂ. ಹೂಡಿಕೆಯ ಸೋಲಾರ್ ಪಾರ್ಕ್ ಅನ್ನು ಇನ್ನೂ ಮೂರು ಕಡೆಗಳಲ್ಲಿ ಸ್ಥಾಪಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾವಗಡ ಸೋಲಾರ್‌ಪಾರ್ಕ್ ಬಳಿಯಲ್ಲೇ 7 ಸಾವಿರ ಎಕರೆ ಪ್ರದೇಶದಲ್ಲಿ 1 ಸಾವಿರ ಮೆ.ವ್ಯಾ.ವಿದ್ಯುತ್ ಉತ್ಪಾದಿಸಲು ಗ್ರೀನ್‌ಕೋ ಸಂಸ್ಥೆ ಮುಂದಾಗಿದ್ದು, 5 ಸಾವಿರ ಕೋಟಿ ರೂ.ಬಂಡವಾಳ ಹೂಡಿಕೆ ಮಾಡಲಿದೆ ಎಂದರು.
ರೈತರು ಭೂಮಿ ನೀಡಲು ಮುಂದೆ ಬಂದಿದ್ದು, ಕ್ರೇಡೆಲ್ ಮೂಲಕ ಖಾಸಗಿ ಸಂಸ್ಥೆಗೆ ಜಮೀನು ಒದಗಿಸಲಾಗುವುದು. ಅದೇ ರೀತಿ ರೋಣ ತಾಲೂಕಿನಲ್ಲಿ 1 ಸಾವಿರ ಮೆ.ವ್ಯಾ ಸೋಲಾರ್ ವಿದ್ಯುತ್ ಉತ್ಪಾದಿಸಲು 5ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ. ಇಲ್ಲಿ ಉತ್ಪಾದಿಸುವ ವಿದ್ಯುತ್ ಕೇಂದ್ರ ವಿದ್ಯುತ್ ಸ್ಥಾವರಕ್ಕೆ ಸೇರ್ಪಡೆಯಾಗಲಿದ್ದು, ಬೇರೆ ರಾಜ್ಯಗಳಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಅಲ್ಲದೆ, ಬೆಳಗಾವಿಯಲ್ಲಿ ಗ್ರೀನ್‌ಕೋ ಕಂಪೆನಿ ಜಲ, ಪವನ ಹಾಗೂ ಸೌರ ವಿದ್ಯುತ್ ಉತ್ಪಾದನೆಗೆ ಸುಮಾರು 10 ಸಾವಿರ ಕೋಟಿ ರೂ.ಹೂಡಿಕೆ ಮಾಡಲಿದ್ದು, 2 ಸಾವಿರ ಮೆ.ವ್ಯಾ. ಉತ್ಪಾದನೆಯಾಗಲಿದೆ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ಮಾಹಿತಿ ನೀಡಿದರು.
ತೃಪ್ತಿ ತಂದಿದೆ: ಕರ್ನಾಟಕ ರಾಜ್ಯವನ್ನು ಇಂಧನ ಸ್ವಾವಲಂಬಿಯನ್ನಾಗಿಸಿದ ತೃಪ್ತಿ ಇದೆ. ಇಲಾಖೆಯ ಜವಾಬ್ದಾರಿ ವಹಿಸಿಕೊಂಡು ನ್ಯಾಯ ಒದಗಿಸಿದ್ದೇನೆಂಬ ಸಮಾಧಾನವಿದೆ. 5 ವರ್ಷದಲ್ಲಿ 10,586 ಮೆ.ವ್ಯಾ.ವಿದ್ಯುತ್ ಉತ್ಪಾದನೆ ಹೆಚ್ಚಿಸಿದ್ದು, ಸ್ಥಾಪಿತ ಸಾಮರ್ಥ್ಯವನ್ನು 24,616 ಮೆ.ವ್ಯಾ.ಗೆ ಹೆಚ್ಚಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಪ್ರಪಂಚದಲ್ಲೇ ಅತಿದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ, ಹೆಚ್ಚಿನ ಪ್ರಸರಣ ಜಾಲ ನಿರ್ಮಾಣ, 145 ಹೊಸ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ, 315 ಉಪಕೇಂದ್ರಗಳ ಉನ್ನತೀಕರಣ ಮಾಡಲಾಗಿದ್ದು, ಇವು ಇಲಾಖೆ ಸಾಧನೆಗಳಾಗಿವೆ ಎಂದ ಅವರು, ಟ್ರಾನ್ಸ್‌ಫಾರ್ಮರ್‌ಗಳ ಕೊರತೆಯನ್ನು ನಿವಾರಿಸಲು ಮೊದಲ ಬಾರಿಗೆ 188 ಪರಿವರ್ತಕ ಬ್ಯಾಂಕ್‌ಗಳ ಸ್ಥಾಪನೆ, 142 ದುರಸ್ಥಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಹೊಸ ಆವಿಷ್ಕಾರ, ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವಲ್ಲಿ ಇಲಾಖೆ ದೇಶದಲ್ಲೆ ಮುಂಚೂಣಿಯಲ್ಲಿದ್ದು, ಜಿಗಣಿ-220ಮೆ.ವ್ಯಾ. ಪ್ರಸರಣ ಜಾಲ, ಸಿಂಗನಾಯಕನಹಳ್ಳಿ ಮಾದರಿ ಯು.ಜಿ.ಕೇಬಲ್, ಕವರ್ ಕಂಡಕ್ಟರ್ ಕಾಮಗಾರಿ ಪೂರ್ಣಗೊಂಡಿದ್ದು, ಬೇರೆ ಯಾವುದೇ ರಾಜ್ಯದಲ್ಲಿ ಇಂತಹ ಮಾದರಿಗಳಿಲ್ಲ ಎಂದರು.
ಪಂಪ್‌ಸೆಟ್ ಸಕ್ರಮ: ರಾಜ್ಯದ ರೈತರ 4 ಲಕ್ಷ ನೀರಾವರಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿದ್ದು, ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಇದ್ದ ತೊಂದರೆ ಪರಿಹರಿಸಿದ್ದು, 10 ಸಾವಿರ ರೂ.ನೀಡಿದರೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಒದಗಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಮಾಡಲಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ನಿನ್ನೆಯಷ್ಟೇ 10,777 ಮೆ.ವ್ಯಾ.ವಿದ್ಯುತ್ ಬೇಡಿಕೆ ಪೂರೈಸಲಾಗಿದೆ. ಇನ್ನೂ 1ಸಾವಿರ ಮೆ.ವ್ಯಾ.ನಷ್ಟು ವಿದ್ಯುತ್ ಬೇಡಿಕೆ ಬಂದರೂ ಅದನ್ನು ನಿಭಾಯಿಸುವ ಸಾಮರ್ಥ್ಯ ಇಲಾಖೆಗೆ ಇದೆ. ಹೀಗಾಗಿ ಬೇಸಿಗೆಯಲ್ಲಿ ಲೋಡ್‌ಶೆಡ್ಡಿಂಗ್ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಣೆ ನೀಡಿದರು.
ರೈತರಿಗೆ ಹಗಲಿನಲ್ಲೆ ವಿದ್ಯುತ್: ಬೇಡಿಕೆ ಹಾಗೂ ಅಗತ್ಯವಿರುವ ಕಡೆ ರೈತರಿಗೂ ಹಗಲಿನಲ್ಲಿ ವಿದ್ಯುತ್ ಒದಗಿಸುವಂತೆ ಸೂಚಿಸಿದ್ದೇನೆ. ಬೋರ್‌ವೆಲ್‌ಗಳಲ್ಲಿ ನೀರು ಇರುವ ಕಡೆ ಹಗಲಿನಲ್ಲೂ ವಿದ್ಯುತ್ ಒದಗಿಸಲಾಗುತ್ತಿದೆ. ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳೇ ಹಗಲಿನಲ್ಲಿ ವಿದ್ಯುತ್ ಒದಗಿಸಲು ಕ್ರಮ ವಹಿಸಲಿದ್ದಾರೆ ಎಂದರು.
‘ಚುನಾವಣೆ ಹಾಗೂ ವಿದ್ಯಾರ್ಥಿಗಳ ಪರೀಕ್ಷೆ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಲೋಡ್‌ಶೆಡ್ಡಿಂಗ್ ಮಾಡದಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಬಿಬಿಎಂಪಿ ಸೇರಿದಂತೆ ಯಾವುದೇ ಕಾಮಗಾರಿ ಇದ್ದರೂ, ವಿದ್ಯುತ್ ಕಡಿತ ಮಾಡಬೇಡಿ ಎಂದು ತಾಕೀತು ಮಾಡಿದ್ದೇನೆ’
-ಡಿ.ಕೆ.ಶಿವಕುಮಾರ್ ಇಂಧನ ಸಚಿವ







