ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಅಧಿಕಾರ ಸ್ವೀಕಾರ ಕುರಿತು ಪರಿಶೀಲಿಸಿ ಸೂಕ್ತ ನಿರ್ಧಾರ: ಸಂಜೀವ್ ಕುಮಾರ್

ಬೆಂಗಳೂರು, ಮಾ.28: ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿರುವಾಗಲೆ ತುಮಕೂರು ವಿವಿಗೆ ಕುಲಪತಿಯಾಗಿ ಪ್ರೊ.ವೈ.ಎಸ್.ಸಿದ್ದೇಗೌಡ ಹಾಗೂ ರಾಯಚೂರು ವಿವಿಗೆ ವಿಶೇಷ ಅಧಿಕಾರಿಯಾಗಿ ಪ್ರೊ.ಮುಜಾಫರ್ ಅಸಾದಿ ಅಧಿಕಾರ ಸ್ವೀಕರಿಸಿರುವುದರ ಕುರಿತು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.
ಬುಧವಾರ ಚುನಾವಣಾ ಆಯೋಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಲಪತಿಗಳ ಅಧಿಕಾರಿಗಳ ಸ್ವೀಕಾರ ನೀತಿ ಸಂಹಿತೆ ವ್ಯಾಪ್ತಿಗೆ ಬರುತ್ತದೆಯೆ ಎಂಬುದನ್ನು ಪರಿಶೀಲಿಸಿದ ನಂತರ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದರು.
ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ ಪೊಲೀಸ್ ಅಧಿಕಾರಿಗಳಿಗೆ ಈಗಲೂ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ರಾಜಕೀಯ ಸಲಹೆಗಾರರ ಸಲಹೆ ಸೂಚನೆಗಳನ್ನು ಯಾರು ಕೇಳಬೇಕಿಲ್ಲ. ಈ ಸಂಬಂಧ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾುವುದು ಎಂದು ಅವರು ಹೇಳಿದರು.
ನೀತಿ ಸಂಹಿತೆ ಉಲ್ಲಂಘಿಸಿದ ಮೂರು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ನಾಯಕರೊಬ್ಬರು ಬಾಡೂಟ ಏರ್ಪಡಿಸಿದ್ದನ್ನು ತಡೆದು ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಹೊನ್ನಾವರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಎಂಜಿನಿಯರ್‌ರೊಬ್ಬರ ಕಾರಿನಲ್ಲಿದ್ದ 7ಲಕ್ಷ ರೂ.ವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ವಿಜಯಪುರದ ದೇವರಹಿಪ್ಪರಗಿಯಲ್ಲಿ ಮಹಿಳೆಯರಿಗೆ ಸೀರೆ ಹಂಚುತ್ತಿದ್ದ ಎ.ಎಸ್.ಪಾಟೀಲ್(ನಡಹಳ್ಳಿ) ವಿರುದ್ಧ ಪ್ರಕರಣ ದಾಖಲಿಸಿ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಮೂಲಕ ರಾಜ್ಯದಲ್ಲಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಬಿಗಿ ಕ್ರಮಗಳನ್ನು ಕೈಗೊಂಡಿದ್ದೇವೆ. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.







