ಯುವತಿಯ ಅತ್ಯಾಚಾರ ನಡೆಸಿದ ಇಬ್ಬರು ಆರೋಪಿಗಳ ಬೆತ್ತಲೆ ಮೆರವಣಿಗೆ

ಇಟಾನಗರ, ಮಾ.28: ಹೈಸ್ಕೂಲ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ ಇಬ್ಬರು ಆರೋಪಿಗಳನ್ನು ಅರುಣಾಚಲ ಪ್ರದೇಶದ ಯಿಂಗ್‌ಕಿಯಾಂಗ್ ಮಾರುಕಟ್ಟೆ ಪ್ರದೇಶದಲ್ಲಿ ಥಳಿಸಿ ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 26ರಂದು ಈ ಘಟನೆ ನಡೆದಿದ್ದು ಆರೋಪಿಗಳಿಗೆ ಥಳಿಸಿದ ಗುಂಪಿನಲ್ಲಿ ಮಹಿಳೆಯರೂ ಸೇರಿದ್ದರು. ಮಾರ್ಚ್ 25ರಂದು ರಾತ್ರಿ 8:30ರ ವೇಳೆ ನಿರ್ಮಾಣ ಹಂತದಲ್ಲಿರುವ ಗಾಂಧಿ ಸೇತುವೆ ಬಳಿ 17ರ ಹರೆಯದ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತ ಸೇರಿದಂತೆ ನಾಲ್ವರು ಅತ್ಯಾಚಾರ ನಡೆಸಿದ್ದರು. ಆರೋಪಿಗಳಲ್ಲಿ ಇಬ್ಬರನ್ನು ಮರುದಿನ ಬೆತ್ತಲೆಗೊಳಿಸಿ ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಡಿಐಜಿ ಜಾನ್ ನಿಹಾಲಿಯಾ ತಿಳಿಸಿದ್ದಾರೆ.
ಘಟನೆಯನ್ನು ದುರದೃಷ್ಟಕರ ಎಂದು ಬಣ್ಣಿಸಿರುವ ರಾಜ್ಯದ ಗೃಹ ಸಚಿವರು, ಅಪ್ರಾಪ್ತ ವಯಸ್ಕರು ಅಪರಿಚಿತ ವ್ಯಕ್ತಿಗಳೊಂದಿಗೆ ಅಜ್ಞಾತ ಸ್ಥಳಕ್ಕೆ ತೆರಳಬಾರದು ಮತ್ತು ಕತ್ತಲಾದ ಬಳಿಕ ಒಬ್ಬಂಟಿಯಾಗಿ ತೆರಳಬಾರದು ಎಂದು ಹೇಳಿದ್ದಾರೆ. ಸಂಘಟಿತ ಪ್ರಯತ್ನದ ಮೂಲಕ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಈ ಮಧ್ಯೆ, ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಉಗ್ರ ಶಿಕ್ಷೆ ನೀಡಬೇಕು ಎಂದು ರಾಜ್ಯದ ಮಹಿಳಾ ಆಯೋಗವು ಪೊಲೀಸ್ ವರಿಷ್ಟರನ್ನು ಒತ್ತಾಯಿಸಿದೆ.







