ಸದೃಢ ಕರ್ನಾಟಕ ನಿರ್ಮಾಣಕ್ಕೆ ಸಾಂಸ್ಕೃತಿಕ ಸಂಪನ್ಮೂಲಗಳ ಸದ್ಬಳಕೆ ಅಗತ್ಯ: ರಾಮಚಂದ್ರ ಗುಹಾ

ಬೆಂಗಳೂರು, ಮಾ. 28: ಸದೃಢ ಕರ್ನಾಟಕ ನಿರ್ಮಾಣ ಮಾಡಬೇಕಾದರೆ ಸಾಂಸ್ಕ್ರತಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಪದ್ಮಭೂಷಣ ರಾಮಚಂದ್ರ ಗುಹಾ ಅಭಿಪ್ರಾಯಪಟ್ಟರು.
ಬುಧವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಲೋಕ ಸಂವಾದ ಸಂಸ್ಥಾಪನಾ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ಕಲ್ಪನೆ ಶತಮಾನದಿಂದ ಭಾಷಾ ಸಾಹಿತ್ಯದ ಲೋಕದೃಷ್ಟಿಯ ಭಾಗವಾಗಿತ್ತು. ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯವು ಕರ್ನಾಟಕದಲ್ಲಿ ರಚನಾತ್ಮಕ ಕಾರ್ಯಕ್ರಮಗಳ ಸಾಂಸ್ಕೃತಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಸಾಮುದಾಯಿಕ ಹಂತದಲ್ಲಿಯೇ ರಾಜ್ಯದಲ್ಲಿ ಸಮಸ್ಯೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಐತಿಹಾಸಿಕ ನಿರ್ಧಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು. ವೈಚಾರಿಕತೆಯನ್ನು ಅರ್ಥ ಮಾಡಿಕೊಳ್ಳುವಷ್ಟು ಬುನಾದಿ ಡಾ.ಅಂಬೇಡ್ಕರ್ ಚಿಂತನೆಯಲ್ಲಿದೆ. ರಾಷ್ಟ್ರೀಯತೆ, ಧರ್ಮ ಸೇರಿದಂತೆ ಹಲವು ವಿಚಾರಗಳನ್ನು ವಿಶಾಲ ಕೋನದಿಂದ ಯೋಚನೆ ಮಾಡುವ ಅಂಬೇಡ್ಕರ್‌ರವರು ವೈಚಾರಿಕ ಬರಹಗಳ ಮೂಲಕ ಸಂವಿಧಾನ ರೂಪಿಸಿದರು ಎಂದು ತಿಳಿಸಿದರು.
ಹೊರದೇಶದ ಪ್ರವಾಸಿಗರು ಹೆಚ್ಚಾಗಿ ಕೇರಳ, ರಾಜಾಸ್ಥಾನದಂತಹ ರಾಜ್ಯಗಳ ಭೇಟಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ನಮ್ಮ ರಾಜ್ಯದಲ್ಲಿ ಪ್ರವಾಸೋದ್ಯಮ ಸೌಲಭ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕಾದ ಅಗತ್ಯವಿದೆ. ಇನ್ನು, ಹೊರ ರಾಜ್ಯದಿಂದ ಬಂದು ಇಲ್ಲಿ ವ್ಯವಹಾರದಲ್ಲಿ ತೊಡಗಿರುವ ಉದ್ಯಮಿಗಳು ಬೆಂಗಳೂರಿಗೆ ಏನು ಕೊಡುಗೆ ನೀಡಿದ್ದಾರೆಂದು ಪ್ರಶ್ನಿಸಿದ ಅವರು, ನಗರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಗ್ರಂಥಾಲಯ ಸ್ಥಾಪಿಸಲು ಮುಂದಾಗಬೇಕೆಂದು ಅವರು ಹೇಳಿದರು.
ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಮಾತನಾಡಿ, ಕನ್ನಡಿಗರು ಕನ್ನಡಕ್ಕೆ ಜೋತು ಬೀಳದೆ ಇತರೆ ಭಾಷಗಳಿಗೂ ಒತ್ತು ನೀಡಬೇಕಿದೆ. ಮಂಗಳೂರಿನಲ್ಲಿ ತುಳು, ಬ್ಯಾರಿ ಭಾಷೆಗಳಿವೆ. ಬಾಂಬೆ ಕರ್ನಾಟಕ ಭಾಗದಲ್ಲಿ ಹಿಂದಿ, ಮರಾಠಿ. ಇನ್ನು, ಹೈದರಾಬಾದ್ ಕರ್ನಾಟಕದಲ್ಲಿ ತೆಲುಗು ಮಾತನಾಡುತ್ತಾರೆ. ಭಾಷೆ ಕಲಿಯಲು ಯಾವುದೇ ಅಡ್ಡಿ ಆತಂಕವಿಲ್ಲ. ಹೀಗಾಗಿ, ಎಲ್ಲ ಭಾಷೆಗಳನ್ನು ಕಲಿಯಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಕೆಂದ್ರ ವಿಶ್ವವಿದ್ಯಾಲಯ ಹೊರತಂದಿರುವ ‘ಕರ್ನಾಟಕ ಕಥನ’, ‘ಸ್ಪೀಕಿಂಗ್ ಫಾರ್ ಕರ್ನಾಟಕ’ ಪುಸ್ತಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಎಸ್.ಜಾಫೆಟ್, ವಿಕಾರ್ ಅಹಮದ್ ಸಯಿದ್, ಶರದ್‌ಚಂದ್ರ ಲೇಲೆ, ಸಿ.ಪಿ.ರವಿಕುಮಾರ್ ಸೇರಿದಂತೆ ಪ್ರಮುಖರಿದ್ದರು.







