‘ಸ್ವಂತ ಕಟ್ಟಡದ ಮೇಲಿನ ಬಿಜೆಪಿ ಗೋಡೆ ಬರಹ’: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಬೆಂಗಳೂರು, ಮಾ. 28: ರಾಜ್ಯದ ವಿವಿಧೆಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಸ್ವಂತ ಕಟ್ಟಡಗಳ ಮೇಲೆ ಬರೆಸಿರುವ ಘೋಷಣೆಗಳನ್ನು ಅಳಿಸಿ ಹಾಕಲಾಗುತ್ತಿದ್ದು, ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲ. ಆದರೂ, ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿರುವುದು ಸಲ್ಲ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಬುಧವಾರ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ್, ಸಹ ವಕ್ತಾರ ಆನಂದ್ ಜಾಗೂ ಮುಖಂಡ ಪ್ರಕಾಶ್ ನೇತೃತ್ವದ ನಿಯೋಗ ದೂರು ಸಲ್ಲಿಸಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.
ಅಧಿಕಾರಿಗಳನ್ನು ಬದಲಾಯಿಸಿ: ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಕಾಂಗ್ರೆಸ್ ಪಕ್ಷದ ಪರ ನಿಲುವುಗಳನ್ನು ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರ ನಿಲುವಿಗೆ ಬದ್ಧರಾಗಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು.
ಅಬ್ದುಲ್ ಅಹದ್-ಡಿಸಿಪಿ ವೈಟ್‌ಫೀಲ್ಡ್, ಸಾಧಿಕ್‌ಪಾಷ-ಇನ್ಸ್‌ಪೆಕ್ಟರ್ ಮಾರತ್ತಹಳ್ಳಿ ಪೊಲೀಸ್ ಠಾಣೆ, ವಿಕ್ಟರ್-ಬೆಳ್ಳಂದೂರು ಪೊಲೀಸ್ ಠಾಣೆ, ರಾಜಶೇಖರ್-ಸಂಚಾರ ಇನ್ಸ್‌ಪೆಕ್ಟರ್ ಬೆಳ್ಳಂದೂರು, ಆಂಜನಪ್ಪ-ಇನ್ಸ್‌ಪೆಕ್ಟರ್, ಮುನಿರಾಕ್ ಎಚ್‌ಸಿ ವರ್ತೂರು ಪೊಲೀಸ್ ಠಾಣೆ, ರಾಮಾನಜೀ, ಮಂಜುನಾಥ್ ಎಚ್‌ಸಿ ಅವಲಹಳ್ಳಿ ಪೊಲೀಸ್ ಠಾಣೆ ಹಾಗೂ ಮಂಡ್ಯ ಜಿಲ್ಲೆ ಕೆಆರ್ ಪೇಟೆ ಚೆಸ್ಕಾಂ ಎಇಇ ಕೃಷ್ಣ ಅವರನ್ನು ವರ್ಗಾವಣೆ ಮಾಡಬೇಕೆಂದು ಬಿಜೆಪಿ ಕೋರಿದೆ.







