ಮೈಸೂರು: ಮಗನ ಸಾವಿನಿಂದ ಮನನೊಂದ ವೈದ್ಯ ದಂಪತಿ ಅತ್ಮಹತ್ಯೆ

ಮೈಸೂರು,ಮಾ.28: ವೈದ್ಯ ವೃತ್ತಿ ಮಾಡಿಕೊಂಡಿದ್ದ ದಂಪತಿಗಳಿಬ್ಬರು ನೇಣಿಗೆ ಶರಣಾದ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ.
ಮೃತರನ್ನು ಸರಸ್ವತಿಪುರಂನ 13ನೇ ಕ್ರಾಸ್ ನಿವಾಸಿ ಡಾ. ಸತೀಶ್ ಕುಮಾರ್(57) ಡಾ.ವೀಣಾ(53) ಎಂದು ಗುರುತಿಸಲಾಗಿದೆ. ಇವರಿಗಿದ್ದ ಒಬ್ಬನೇ ಒಬ್ಬ ಮಗ ಕಳೆದ ಎಂಟು ವರ್ಷಗಳ ಹಿಂದೆ ಕುಕ್ಕರಹಳ್ಳಿ ಜಂಕ್ಷನ್ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ. ಆವಾಗಿನಿಂದಲೇ ಮಾನಸಿಕವಾಗಿ ನೊಂದಿದ್ದ ದಂಪತಿ ತಮ್ಮ ಪ್ರಾಕ್ಟೀಸ್ ಅನ್ನು ನಿಲ್ಲಿಸಿದ್ದರು ಎನ್ನಲಾಗಿದೆ.
ನಿನ್ನೆ ಸಂಜೆ ಸತೀಶ್ ಕುಮಾರ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ವೈದ್ಯರ ಬಳಿ ತೆರಳಿದಾಗ 'ಅವರಿಗೆ ಹಾರ್ಟ್ ನಲ್ಲಿ ಬ್ಲಾಕ್ ಆಗಿದೆ. ಬೈಪಾಸ್ ಮಾಡಬೇಕು' ಎಂದಿದ್ದರು. ಇದರಿಂದ ಮನನೊಂದ ದಂಪತಿಗಳು ಇಂದು ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮನೆಯವರು ಇವರಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸದ ಕಾರಣ ಪಕ್ಕದ ಮನೆಯವರಿಗೆ ಕರೆ ಮಾಡಿ ವಿಚಾರಿಸಲು ತಿಳಿಸಿದ್ದಾರೆ. ಅವರು ಕಿಟಕಿಯ ಬಳಿ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಸರಸ್ವತಿಪುರಂ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.





