ಸಿಎಂ ಪುತ್ರನ ಸಹಿತ ಇಷ್ಟು ಮುಖಂಡರ ಮಕ್ಕಳಿಗೆ ಬೇಕು ' ಕೈ' ಟಿಕೆಟ್

ಬೆಂಗಳೂರು, ಮಾ.28: ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸಲು ಮುಂದಾಗಿರುವ ಮುಖ್ಯಮಂತ್ರಿ, ಸಚಿವರು, ಸಂಸದರು, ಹಿರಿಯ ಶಾಸಕರು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಮೂಲಕ ತಮ್ಮ ಮಕ್ಕಳ ಹೆಸರುಗಳನ್ನು ಕೆಪಿಸಿಸಿಗೆ ತಲುಪಿಸುವಲ್ಲಿ ಒಂದು ಹಂತದಲ್ಲಿ ಯಶಸ್ವಿಯಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರ-ಡಾ.ಯತೀಂದ್ರ (ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ), ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರ-ಸೌಮ್ಯಾ ರೆಡ್ಡಿ(ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ), ಕೆಜಿಎಫ್ ವಿಧಾನಸಭಾ ಕ್ಷೇತ್ರ-ರೂಪಾ(ಸಂಸದ ಕೆ.ಎಚ್.ಮುನಿಯಪ್ಪ ಪುತ್ರಿ).
ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಧಾನಸಭಾ ಕ್ಷೇತ್ರ-ನಿವೇದಿತ್ ಆಳ್ವ(ಹಿರಿಯ ನಾಯಕಿ ಮಾರ್ಗರೇಟ್ ಆಳ್ವ ಪುತ್ರ), ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ-ಸಂತೋಷ್(ಕಾನೂನು ಸಚಿವ ಟಿ.ಬಿ.ಜಯಚಂದ್ರ ಪುತ್ರ), ಟಿ.ನರಸೀಪುರ ವಿಧಾನಸಭಾ ಕ್ಷೇತ್ರ-ಸುನೀಲ್ ಬೋಸ್(ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುತ್ರ) ಹೆಸರು ಚಾಲ್ತಿಯಲ್ಲಿದೆ.
ಇದಲ್ಲದೆ, ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪಮೊಯ್ಲಿ, ತನ್ನ ಪುತ್ರ ಹರ್ಷ ಮೊಯ್ಲಿಯನ್ನು ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿಸಲು ಪ್ರಯತ್ನಿಸುತ್ತಿದ್ದರು. ಆದರೆ ಟ್ವೀಟ್ ವಿವಾದದ ಬಳಿಕ ತನ್ನ ಪುತ್ರನಿಗೆ ಟಿಕೆಟ್ ಬೇಡ ಎಂದು ವೀರಪ್ಪ ಮೊಯ್ಲಿ ಹೇಳಿದ್ದರು. ಅಲ್ಲದೆ ಮಾಜಿ ಸಚಿವೆ ಮೋಟಮ್ಮ ಕೂಡಾ ತಮ್ಮ ಪುತ್ರಿಯನ್ನು ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿಸಲು ಪ್ರಯತ್ನಿಸುತ್ತಿದ್ದಾರೆ.
ಆದರೆ, ಯಾವ ಮುಖಂಡರ ಮಕ್ಕಳಿಗೆ ಟಿಕೆಟ್ ಸಿಗಲಿದೆ ಎಂಬುದು ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿದೆ.







