ಕೇಂದ್ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಮನವಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ
ಅಪ್ರಾಪ್ತರಿಗೆ ಮದ್ಯ ಮಾರಾಟ ನಿಷೇಧ ವಿಚಾರ

ಬೆಂಗಳೂರು, ಮಾ.28: ಅಪ್ರಾಪ್ತರಿಗೆ ಮದ್ಯ ಮಾರಾಟ ನಿಷೇಧ ನಿಯಮ ಉಲ್ಲಂಘಿಸುವ ಮದ್ಯದಂಗಡಿಗಳ ಪರವಾನಿಗೆ ರದ್ದು ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಕೇಂದ್ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಮನವಿ ಸಲ್ಲಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.
ಇಪ್ಪತ್ತೊಂದು ವರ್ಷದೊಳಗಿನ ಮಕ್ಕಳಿಗೆ ಮದ್ಯ ಮಾರಾಟ ನಿಷೇಧಿಸಿರುವ ಅಬಕಾರಿ ಕಾಯಿದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸರಕಾರಕ್ಕೆ ಸೂಚಿಸಲು ಕೋರಿ 17 ವರ್ಷದ ಲಯ ಸಜ್ಜನ್ ಮರಿಯಂಡ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ಬಿ.ಎಂ.ಶ್ಯಾಮ್‌ಪ್ರಸಾದ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಅಲ್ಲದೆ, ಕೇಂದ್ರ ಮಕ್ಕಳ ಹಕ್ಕಗಳ ರಕ್ಷಣಾ ಆಯೋಗ ಹಾಗೂ ರಾಜ್ಯ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಲು ಸೂಚಿಸಿ ಅರ್ಜಿ ಇತ್ಯರ್ಥ ಪಡಿಸಿತು.
ಕರ್ನಾಟಕ ರಾಜ್ಯದಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಬಾರದು ಎಂಬ ನಿಯಮವನ್ನು ಅಬಕಾರಿ ಇಲಾಖೆ ರೂಪಿಸಿದೆ. ಆದರೆ, ರಾಜ್ಯ ಸರಕಾರ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಣಾಮದಿಂದ ರಾಜ್ಯದಲ್ಲಿ ಅಪ್ರಾಪ್ತರಿಗೆ ಮದ್ಯ ಮತ್ತು ಮಾದಕ ವಸ್ತುಗಳ ಲಭ್ಯವಾಗುತ್ತಿವೆ. ಈ ಕುರಿತು ಯಾವುದೇ ನಿರ್ಬಂಧ ವಿಧಿಸಲು ಸರಕಾರ ಮುಂದಾಗುತ್ತಿಲ್ಲ. ಈ ಬೆಳವಣಿಗೆ ಯುವ ಸಮುದಾಯದಲ್ಲಿ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಲಿದೆ. ಮುಂದಿನ ಪೀಳಿಗೆಗೆ ಕಂಠಕವಾಗಲಿದೆ. ರಾಜ್ಯ ಸರಕಾರ ಈ ಸಂಬಂಧ ನಿರ್ಬಂಧ ವಿಧಿಸಲು ಯಾವುದೇ ಯಾಂತ್ರೀಕೃತ ಪ್ರಯೋಗಗಳನ್ನು ನಡೆಸಿಲ್ಲ. ಹೀಗಾಗಿ, ನ್ಯಾಯಾಲಯ ಸೂಕ್ತ ಆದೇಶ ನೀಡಿದಲ್ಲಿ ಸರಕಾರದ ಪ್ರಾಧಿಕಾರಿಗಳು ಕಾರ್ಯಪ್ರವೃತ್ತರಾಗಲಿದ್ದು, ಯುವ ಜನಾಂಗದ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಲಿದೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅಲ್ಲದೆ, ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡುವ ಬಾರ್ ಮಾಲಕರ ಪರವಾನಿಗೆ ರದ್ದು ಮಾಡಬೇಕು. 21ಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಬಾರದು ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಈ ಸಂಬಂಧ ಮಾರ್ಗಸೂಚಿ ರಚಿಸಲು ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.







