ಪ್ರಧಾನಿಯಾಗಿ ದಿಲ್ಲಿಯಿಂದ ಅಲ್ಲ, 'ಇಲ್ಲಿಂದ' ದೇಶ ಆಳ್ತಾರೆ ಹುಚ್ಚ ವೆಂಕಟ್

ಮಂಗಳೂರು, ಮಾ.28: ಶಾಸಕ ಮುನಿರತ್ನ ತಮ್ಮ ಕ್ಷೇತ್ರದಲ್ಲಿ ಕುಕ್ಕರ್ ಹಂಚುವ ಕಾರ್ಯದ ಮೂಲಕ ಮತಗಳನ್ನು ಕೊಳ್ಳಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಎಚ್ಚರಿಕೆ ವಹಿಸಬೇಕು. ಈ ರೀತಿ ಮತಗಳನ್ನು ಮಾರಾಟ ಮಾಡುವವರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂದು ಹುಚ್ಚ ವೆಂಕಟ್ ಸಲಹೆ ನೀಡಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಇಂದು ತೀರಾ ಹದಗೆಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಇಂತಹ ಓಟಿಗಾಗಿ ಆಮಿಷ ಒಡ್ಡುವ ಶಾಸಕರು ಪಕ್ಷದ ಹೆಸರನ್ನು ಕೆಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮುಂದೊಂದು ದಿನ ತಾನು ಪ್ರಧಾನಿಯಾಗುವುದು ಖಂಡಿತಾ ಎಂದು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ ಹುಚ್ಚ ವೆಂಕಟ್, ತಾನು ಪ್ರಧಾನಿಯಾದರೆ ವಿಧಾನಸೌಧದಲ್ಲಿದ್ದುಕೊಂಡೇ ದೇಶವನ್ನು ಆಳುತ್ತೇನೆ ಎಂದರು. ಮಾತ್ರವಲ್ಲದೆ ತಮ್ಮ ಮಂತ್ರಿಮಂಡಲದಲ್ಲಿ ಪತ್ರಕರ್ತರು, ಪೊಲೀಸ್ ಆಧಿಕಾರಿಗಳು, ಐಟಿ ತಜ್ಞರು ಮಂತ್ರಿಗಳಾಗಿರುತ್ತಾರೆ ಎಂದರು.
ಇಂದಿರಾ ಕ್ಯಾಂಟೀನ್ ವಿರುದ್ಧ ಅಪಸ್ವರ ಎತ್ತಿದ ಅವರು, ಅಲ್ಲಿ ನಮ್ಮ ತೆರಿಗೆ ಹಣದಿಂದ ಆಹಾರವನ್ನು ನೀಡಲಾಗುತ್ತದೆ. ಅದಕ್ಕೆ ನಾವು ನಮ್ಮಿಂದ ಒಂದಿಷ್ಟು ಹಣವನ್ನೂ ನೀಡುತ್ತೇವೆ ಹಾಗಿದ್ದರೆ ಅದಕ್ಕೆ ಇಂದಿರಾ ಕ್ಯಾಂಟೀನ್ ಎಂಬ ಹೆಸರು ಯಾಕೆ ? ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೋದಿ ಕ್ಯಾಂಟೀನ್ ಕೂಡಾ ಬರಬಹುದು. ಬಳಿಕ ಜೆಡಿಎಸ್ ಲಂಚ್ ಎಂಬುದು ಆರಂಭವಾಗಬಹುದು ಎಂದು ಅವರು ತಮ್ಮ ಎಂದಿನ ಶೈಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
‘ಡಿಕ್ಟೇಟರ್ ಹುಚ್ಚ ವೆಂಕಟ್’ ಎಂಬ ಹೊಸ ಚಲನಚಿತ್ರದ ಪ್ರೋಮೋ ಹಾಡನ್ನು ಪ್ರದರ್ಶಿಸಿದ ಅವರು, ಚಿತ್ರಕ್ಕೆ ಸೆನ್ಸಾರ್ ಮಂಡಳಿ ಅಡ್ಡಿಪಡಿಸಿದ್ದಲ್ಲಿ ಯುಟ್ಯೂಬ್ ಮೂಲಕ ಚಿತ್ರವನ್ನು ಪ್ರಸಾರ ಮಾಡುವುದಾಗಿ ಹೇಳಿದರು. ಚಿತ್ರದ ನಾಯಕ ನಟಿ ಐಶ್ವರ್ಯಾ ಉಪಸ್ಥಿತರಿದ್ದರು.







