ಶಸ್ತ್ರಾಸ್ತ್ರ ಬಳಕೆಗೆ ನಿರ್ಬಂಧ: ಉಡುಪಿ ಜಿಲ್ಲಾಧಿಕಾರಿ
ಚುನಾವಣೆ

ಉಡುಪಿ, ಮಾ. 28: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಮಾ. 27ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಮುಕ್ತ, ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವುದನ್ನು ಖಾತ್ರಿ ಪಡಿಸುವ ಸಲುವಾಗಿ ಆಯುಧ ಪರವಾನಿಗೆ ಹೊಂದಿರುವ ಪರವಾನಿಗೆದಾರರು ಆಯುಧ ಬಳಸುವುದನ್ನು ನಿಷೇಧಿಸಿದ್ದು, ತಕ್ಷಣವೇ ಆಯುಧಗಳನ್ನು ಸಮೀಪದ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸುವಂತೆ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.
ಚುನಾವಣೆಯ ಅವಧಿಯಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಚುನಾವಣೆ ಮುಗಿಯುವ ವರೆಗೆ ಆಯುಧ, ಶಸ್ತ್ರಾಸ್ತ್ರ, ಮಾರಕಾಯುಧ, ಮದ್ದುಗುಂಡುಗಳನ್ನು ಹೊಂದಿರು ವುದು, ಸಾಗಿಸುವುದು ಹಾಗೂ ಬಳಕೆಗಳ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಆತ್ಮರಕ್ಷಣೆಗಾಗಿ, ಕೃಷಿ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವ ಎಲ್ಲಾ ಅಧಿಕೃತ ಪರವಾನಿಗೆ ದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು (ಎಸ್‌ಬಿಬಿಎಲ್, ಡಿಬಿಬಿಎಲ್, ಎಸ್‌ಬಿಎಂಎಲ್, ಡಿಬಿಎಂ ಎಲ್, ಎನ್‌ಪಿಬಿ, ರೈಫಲ್), ಶಸ್ತ್ರ ಪರವಾನಿಗೆ ಹೊಂದಿರುವ ಎಲ್ಲಾ ವಿಧದ ಶಸ್ತ್ರಾಸ್ತ್ರಗಳನ್ನು ತಮ್ಮ ವಿಳಾಸ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತವಾಗಿ ಪರವಾನಿಗೆ ಹೊಂದಿರುವ ಡೀಲರ್ ಶಾಪ್‌ಗಳಲ್ಲಿ ಕಡ್ಡಾಯವಾಗಿ ಎ.20ರೊಳಗೆ ಠೇವಣಿ ಮಾಡಿ ರಶೀದಿ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಚುನಾವಣಾ ಫಲಿತಾಂಶ ಘೋಷಣೆಯಾದ ಒಂದು ವಾರದ ನಂತರ ಶಸ್ತ್ರಾಸ್ತ್ರ ಠೇವಣಿ ಪಡೆದ ಠಾಣಾಧಿಕಾರಿಗಳಿಂದ ಅಥವಾ ಡೀಲರ್‌ಗಳಿಂದ ಪರವಾನಿಗೆ ದಾರರು ಶಸ್ತ್ರಾಸ್ತ್ರಗಳನ್ನು ಮರು ಪಡೆದುಕೊಳ್ಳಬಹುದು. ಈ ನಿಷೇಧ ಆದೇಶವು ಸರಕಾರಿ ಕರ್ತವ್ಯಕ್ಕೆ ಹಾಗೂ ಬ್ಯಾಂಕ್ ಸೆಕ್ಯೂರಿಟಿ ಸಂಸ್ಥೆಗಳ ಭದ್ರತೆ ಹಾಗೂ ಸಂರಕ್ಷತಾ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ವೇಳೆ ಶಸ್ತ್ರಾಸ್ತ್ರ ಆಯುಧ ಬಳಸುವು ದಕ್ಕೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ವಿವರಿಸಲಾಗಿದೆ.







