ಫ್ಲೋರಿಡಾ ಏರೋಡಿಸೈನ್ ಸ್ಪರ್ಧೆ: ಎಂಐಟಿ ವಿಕ್ರಮ

ಮಣಿಪಾಲ, ಮಾ.28: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಏರೋಎಂಐಟಿ ತಂಡ, ಈ ತಿಂಗಳು ಫ್ಲೋರಿಡಾದ ಲೇಕ್‌ಲ್ಯಾಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಎಸ್‌ಎಇ ಏರೋ ಡಿಸೈನ್ ಈಸ್ಟ್ ಸ್ಪರ್ಧೆಯ ಒಂದು ವಿಭಾಗದಲ್ಲಿ ಅಗ್ರಸ್ಥಾನ ಪಡೆದರೆ, ಸಮಗ್ರವಾಗಿ ಏಳನೇ ಸ್ಥಾನ ಪಡೆದು ಉತ್ತಮ ಸಾಧನೆ ಮೆರೆದಿದೆ.
ಎಂಐಟಿಯ ವಿವಿಧ ಬ್ರಾಂಚ್‌ಗಳ ವಿದ್ಯಾರ್ಥಿಗಳನ್ನೊಳಗೊಂಡ ತಂಡ, ಆಧುನಿಕ ದ್ರೋಣ್ ತಂತ್ರಜ್ಞಾನ ಸಂಶೋಧನೆ, ಮೈಕ್ರೋ ಏರಿಯಲ್ ವೆಹಿಕಲ್ಸ್ (ಎಂಎವಿ)ನ ವಿನ್ಯಾಸ, ಸಂಯೋಜನೆ, ಪರೀಕ್ಷೆಗಳನ್ನು ನಡೆಸಿತ್ತು.
ತಂಡ ತಂತ್ರಜ್ಞಾನ ವಿನ್ಯಾಸ ವರದಿಯಲ್ಲಿ ಮೊದಲ ಸ್ಥಾನ ಪಡೆದರೆ, ವೌಖಿಕ ಬ್ಯುಸಿನೆಸ್ ಪ್ರಾತ್ಯಕ್ಷಿಕೆಯಲ್ಲಿ ಮೂರನೇ, ಫ್ಲೈಟ್ ಸ್ಕೋರ್‌ನಲ್ಲಿ ಐದನೇ ಹಾಗೂ ಸಮಗ್ರ ನಿರ್ವಹಣೆಯಲ್ಲಿ ಭಾಗವಹಿಸಿದ 25 ತಂಡಗಳಲ್ಲಿ ಗಮನಾರ್ಹವಾದ ಏಳನೇ ಸ್ಥಾನ ಪಡೆದಿದೆ ಎಂದು ಎಂಐಟಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಭಾರತೀಯ ತಂಡಗಳಲ್ಲಿ ಏರೋಎಂಐಟಿ ತಂಡದ ಸಾಧನೆಯೇ ಅತ್ಯುತ್ತಮವಾಗಿತ್ತು. ನಮಗೆ ಹಲವು ಅಡೆತಡೆಗಳು ಎದುರಾಗಿದ್ದವಾದರೂ, ಅವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ ಎಂದು ತಂಡದ ನಾಯಕರಾಗಿದ್ದ ಮೆಕ್ಯಾನಿಕ್ ಇಂಜಿನಿಯರಿಂಗ್ ವಿದ್ಯಾರ್ಥಿ ಅರ್ಮತ್ಯ ಗುಪ್ತಾ ನುಡಿದರು.
ಈ ವರ್ಷ ನಾವೆದುರಿಸಿದ ಅತ್ಯಂತ ದೊಡ್ಡ ಸಮಸ್ಯೆ ಎಂದರೆ ಸಂಪನ್ಮೂಲಗಳ ಲಭ್ಯತೆಯದ್ದಾಗಿತ್ತು. ನಮ್ಮದು ಸೀಮಿತ ಸಂಪನ್ಮೂಲವಾಗಿದ್ದು, ನಮ್ಮ ಯೋಜನೆಗೆ ಕಸ್ಟಮ್ ಕಾನೂನು ಪೂರಕವಾಗಿರಲಿಲ್ಲ. ಇದರಿಂದ ದುಬಾರಿ ತೆರಿಗೆ ತೆತ್ತು ನಾವು ಹಲವು ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕಾ ಯಿತು. ಇದರಿಂದ ನಮ್ಮ ಯೋಜನಾ ಬಜೆಟ್ ಹಿಗ್ಗುವಂತಾಯಿತು. ಆದರೂ ಕಾಲೇಜು ನಮ್ಮ ಬೆಂಬಲಕ್ಕೆ ನಿಂತಿದ್ದರಿಂದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಯಿತು ಎಂದು ಗುಪ್ತಾ ವಿವರಿಸಿದರು.
ಫೋರಿಡಾ ಸ್ಪರ್ಧೆಯಲ್ಲಿ ಭಾಗವಹಿಸಿದ ಏರೋಎಂಐಟಿ ತಂಡದಲ್ಲಿ ಅರ್ಮತ್ಯ ಗುಪ್ತ, ಸಮರ್ಥ ಅಗರವಾಲ್, ಕೌಶಿಕ್ ಚಾವಲಿ, ಬ್ರಿಯಾನ್ ಡಿಸೋಜ, ವಿಷ್ಣು ಪ್ರಿಯತಮ್, ಆದಿತ್ಯ ರಮೇಶ್, ಜೋಯೆಲ್ ಡಿಸೋಜ, ಲಾವಣ್ಯ ವಿಜಿ, ಅಶ್ವಿನಿ ವರ್ಕಿ, ಗೌತಮ್ ಮೆನನ್, ಅರೂನ್ ಸಿಕ್ವೇರಾ ಮುಂತಾದವರಿದ್ದರು.







